ಸಾಹಿತಿ ಡಿ.ಐ.ಅಬೂಬಕರ್ ಕೈರಂಗಳರಿಗೆ ಅದ್ದೂರಿಯ ಸನ್ಮಾನ
ಮಂಗಳೂರು: ಸತತವಾಗಿ 900 ದಿನಗಳಿಂದ ಸಹಸ್ರಾರು ಜನರಿಗೆ ಬೆಳಗ್ಗೆ "ಶುಭ ಮುಂಜಾನೆ" ಯ ಮೂಲಕ ಚಿಂತ್ತೋದ್ದೀಪಕ ನುಡಿಯಿಂದ ಚೈತನ್ಯ ಮೂಡಿಸುತ್ತಾ ಬಂದಿರುವ ಖ್ಯಾತ ಕವಿ, ಸಾಹಿತಿ, ಸಾಹಿತ್ಯೋದ್ಧಾರಕ, ಸಮಾಜ ಸೇವಕ ಹಾಗೂ ಹಾಲಿ ಉದ್ಯಮಿಯಾಗಿರುವ ಡಿ.ಐ. ಅಬೂಬಕರ್ ಕೈರಂಗಳ ಅವರಿಗೆ ಇರ್ವತ್ತೂರು ಪದವಿನಲ್ಲಿ ನಿನ್ನೆ ರಾತ್ರಿ ಅದ್ದೂರಿಯ ಸನ್ಮಾನ ನೀಡಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹನೀಫ್ ಹಾಜಿ ಗೋಳ್ತಮಜಲು, ಹಸನಬ್ಬ ಚಾರ್ಮಾಡಿ ಹಾಗೂ ಶಾಹುಲ್ ಹಮೀದ್ ಕುತ್ತಮೊಟ್ಟೆ ಸುಳ್ಯ ಎಂಬ ಇತರ ಮೂವರು ಮಹನೀಯರಿಗೂ ವಿವಿಧ ರಂಗಗಳಲ್ಲಿ ಅವರು ತೋರಿದ ಸಾಧನೆಗಳನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಚಾರ್ಮಾಡಿ ಹಸನಬ್ಬನವರಿಗೆ ಅನಾರೋಗ್ಯ ನಿಮಿತ್ತ ಅವರ ಅನುಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇರ್ವತ್ತೂರು ಪದವು ಬದ್ರಿಯಾ ಜುಮಾ ಮಸೀದಿ ಸಮಿತಿ ಹಾಗೂ ಬದ್ರಿಯ ಯಂಗ್ ಮೆನ್ಸ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಭವ್ಯ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ವಾಗ್ಮಿ ಸಿರಾಜುದ್ದೀನ್ ಖಾಸಿಮಿಯವರ ಉಪಸ್ಥಿತಿಯಲ್ಲಿ ನಡೆಸಲಾದ ಈ ಉಜ್ವಲ ಕಾರ್ಯಕ್ರಮದಲ್ಲಿ ಮಿತ್ತಬೈಲು ಉಸ್ತಾದರ ಪುತ್ರರಾದ ಇರ್ಶಾದ್ ದಾರಿಮಿ ಅಲ್ ಅಝ್ಹರಿ, ರಫೀಕ್ ಇರ್ವತ್ತೂರು, ಮಿತ್ತಬೈಲು ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ, ಎಸ್ ಅಬ್ದುರ್ರಹ್ಮಾನ್ ಉಪಾಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಮೂಡುಪಡಕೋಡಿ ಮುಂತಾದ ಅನೇಕ ಗಣ್ಯ ಉಲಮಾ, ಉಮರಾಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯುದ್ಧೀಪಗಳಿಂದ ಅಲಂಕೃತವಾದ ವಿಶಾಲವಾದ ಮೈದಾನದಲ್ಲಿ ಸ್ಥಾಪಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಸಾವಿರಾರು ಮಂದಿ ಪ್ರೇಕ್ಷಕರನ್ನೊಳಗೊಂಡ ಈ ಗ್ರ್ಯಾಂಡ್ ಕಾರ್ಯಕ್ರಮವು ಇರ್ವತ್ತೂರು ಜಮಾಅತರು ಮತ್ತು ಬದ್ರಿಯಾ ಯಂಗ್ ಮೆನ್ಸ್‌ನ ಯುವಕರ ಇಛ್ಛಾಶಕ್ತಿ, ಸತತ ಪ್ರಯತ್ನ, ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ನಿಷ್ಠೆಯ ಪಲಶ್ರುತಿಯಾಗಿತ್ತು.
ಡಿ.ಐ. ಅವರ ಮೂರೂವರೆ ದಶಕಗಳ ಕಾಲದ ಸಾಹಿತ್ಯ ಹಾಗೂ ಸಮಾಜ ಸೇವೆಯನ್ನೂ ಅವರ ಸಾಹಿತ್ಯ ರಂಗದ ಫೇವರಿಟ್ ಸಾಧನೆಯಾಗಿರುವ ಶುಭ ಮುಂಜಾನೆ ಯನ್ನೂ ವೇದಿಕೆಯಲ್ಲಿ ಪ್ರಶಂಸಾಪೂರ್ವಕವಾಗಿ ಪ್ರಸ್ತುತ ಪಡಿಸಿದಾಗ ಇಡೀ ಸಭಿಕರ ಅಭಿಮಾನಪೂರ್ವಕವಾದ ದೃಷ್ಟಿಗಳು ವೇದಿಕೆಯಲ್ಲಿದ್ದ ವಿಶೇಷ ಸನ್ಮಾನದಾಸನದಲ್ಲಿ ಉಪವಿಷ್ಠರಾಗಿದ್ದ ಡಿ. ಐ. ಯವರ ಮೇಲೆ ನೆಟ್ಟಿತ್ತು.
ಸನ್ಮಾನಕ್ಕೆ ಉತ್ತರವಾಗಿ ಡಿ. ಐ. ರವರು ನುಡಿದ ಚುಟುಕು ಮಾತುಗಳು ಅವರ "ಶುಭ ಮುಂಜಾನೆ" ಯ ಹಾಗೆಯೇ ಕಿರಿದುದರಲ್ಲಿ ಹಿರಿದರ್ಥವಿರುವ ಸೌಮ್ಯೋಕ್ತಿಯಾಗಿತ್ತು. ನನಗೆ ಸನ್ಮಾನಿಸಲಾಯಿತು ಎಂಬ ಸಂತೋಷಕ್ಕಿಂತ, ಕನ್ನಡ ಸಾಹಿತ್ಯ, ಅದರಲ್ಲಂತೂ ಸುನ್ನತ್ ಜಮಾಅತಿಗೆ ಸಾಹಿತ್ಯ ಸೇವೆ ಎಂಬುದನ್ನು ಸಂಘಟಕರು ಪರಿಗಣಿಸಿದ್ದು ನನಗೆ ಸಂತೋಷವಾಗಿದೆ ಎಂದ ಅವರು, ಇರ್ವತ್ತೂರು ಪದವಿನ ವಿದ್ಯಾವಂತ, ಸುಸಂಸ್ಕೃತ ಮುಸಲ್ಮಾನರ ಈ ಸಾಹಿತ್ಯಾಸಕ್ತಿ ಹಾಗೂ ಸುನ್ನತ್ ಜಮಾಅತ್ ನಿಷ್ಠೆ ಎಲ್ಲಾ ಕಡೆಗಳಲ್ಲೂ ಪ್ರಕಟವಾಗಬೇಕು ಎಂದರು.
ಇರ್ವತ್ತೂರು ಪದವಿನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಭಾಷಣಗಾರ ಬಹು:ಸಿರಾಜುದ್ದೀನ್ ಖಾಸಿಮಿಯವರು ಡಿ. ಐ. ಅಬೂಬಕರ್ ರವರು ಪ್ರಧಾನ ನಿರ್ವಾಹಕರಾಗಿ ಮುನ್ನಡೆಯುತ್ತಿರುವ ಹಾಗೂ ಕೇರಳ- ಕರ್ನಾಟಕದಲ್ಲಿ ಸುಖ್ಯಾತಿ ಪಡೆದಿರುವ ಆ್ಯಕ್ಸಿಬ್ಲೂ ಕಂಪನಿಯ ಕುಡಿಯುವ ನೀರಿನ ಬಾಟಲ್ ಎತ್ತಿ ಹಿಡಿದು ಆಶೀರ್ವದಿಸಿದರು.
ಡಿ. ಐ. ರವರ ಸುನ್ನೀ ಸಾಹಿತ್ಯ ಸೇವೆಯನ್ನು ಪ್ರಶಂಸಿಸಿದ ಅವರು ಡಿ.ಐ. ರವರ ಉಸ್ತುವಾರಿಯಲ್ಲಿ ಆ್ಯಕ್ಸಿಬ್ಲೂ ಶುದ್ಧಜಲ ಕಂಪೆನಿ ಉಜ್ವಲ ಯಶಸ್ಸು ಪಡೆಯಲೆಂದು ಹಾರೈಸಿದರು. ಅಲ್ಲದೆ ಆ್ಯಕ್ಸಿಬ್ಲೂ ಶುದ್ಧ ಜಲದ ಬಂಟ್ವಾಳ ತಾಲೂಕು ಮಟ್ಟದ ಅಧಿಕೃತ ಡಿಸ್ಟಿಬ್ಯೂಟರಾಗಿ ಇರ್ವತ್ತೂರಿನ ಖ್ಯಾತ ಸಂಘಟಕ, ಧಾರ್ಮಿಕ, ಸಾಮಾಜಿಕ ಮುಂದಾಳು ರಫೀಖ್ ಇರ್ವತ್ತೂರು ಅವರಿಗೆ ಕಂಪೆನಿಯ ಪರವಾಗಿ ವಹಿಸಿಕೊಟ್ಟು ಶುಭ ಹಾರೈಸಿದರು.