ಚಾಟಿಯಿಂದ ತಮಗೆ ಹೊಡೆದುಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಅಣ್ಣಾಮಲೈ ಪ್ರತಿಭಟನೆ!
ಬೆಂಗಳೂರು: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಚಾಟಿಯಿಂದ ತಮಗೆ ಹೊಡೆದುಕೊಳ್ಳುವ ಮೂಲಕ ಹೆಣ್ಣುಮಕ್ಕಳ ಲೈಂಗಿಕ ದೌರ್ಜನ್ಯ ವಿರುದ್ಧ ಪ್ರತಿಭಟಿಸಿದರು. ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಮಲೈ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ತಮಿಳುನಾಡಿನ ಅಣ್ಣಾ ಯೂನಿವರ್ಸಿಟಿಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಖಂಡಿಸಿ, ಡಿಎಂಕೆ ಸರ್ಕಾರದ ವಿರುದ್ಧ ಅಣ್ಣಾಮಲೈ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ. ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಇಂದು ತಮ್ಮ ಪ್ರತಿಭಟನೆಯ ಸಂಕೇತವಾಗಿ ಹಲವು ಬಾರಿ ಚಾಟಿಯೇಟು ತಮಗೆ ತಾವೇ ಕೊಟ್ಟುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಡಿಎಂಕೆ ಸರ್ಕಾರ ಮತ್ತು ಪೊಲೀಸರು ಸಂತ್ರಸ್ತೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಹಾಗು ಆಕೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. ಇದು ಆಡಳಿತದ ಅಸಮರ್ಥತೆಯನ್ನು ಪ್ರತಿಬಿಂಬಿಸುವ ನಾಚಿಕೆಗೇಡಿನ ಕೃತ್ಯ ಎಂದು ಅವರು ಕಿಡಿಕಾರಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ನಾನು ಪಾದರಕ್ಷೆಗಳನ್ನು ಕಾಲಿಗೆ ಹಾಕುವುದಿಲ್ಲ ಎಂದು ಅಣ್ಣಾಮಲೈ ನಿನ್ನೆ ಘೋಷಣೆ ಮಾಡಿದ್ದರು. ಅಣ್ಣಾ ಯೂನಿವರ್ಸಿಟಿಯಲ್ಲಿ ಸಿಸಿಟಿವಿ ಕ್ಯಾಮರಾಗಳ ಕೊರತೆ ಇದೆ. ಅಲ್ಲದೆ ಮಹಿಳೆಯರ ಸುರಕ್ಷತೆಗಾಗಿ ಉದ್ದೇಶಿಸಿರುವ ನಿರ್ಭಯಾ ನಿಧಿಯನ್ನು ರಾಜ್ಯವು ಎಷ್ಟರಮಟ್ಟಿಗೆ ಬಳಸಿದೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದರು.
ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದಕ್ಕಾಗಿ ಅಣ್ಣಾಮಲೈ ಅವರು ತಮಿಳುನಾಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪ್ರಕರಣ ಎಫ್‌ಐಆರ್ ಸಾರ್ವಜನಿಕರ ಲಭ್ಯತೆಗೆ ಹೇಗೆ ಅವಕಾಶ ನೀಡಿದ್ದಾರೆ. ಅಲ್ಲದೆ ಎಫ್‌ಐಆರ್ ಅನ್ನು ಬಹಿರಂಗಪಡಿಸುವ ಮೂಲಕ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದೀರಿ. ಈ ವಿಚಾರದಲ್ಲಿ ಪೊಲೀಸರು ಹಾಗೂ ಡಿಎಂಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು. ನಿರ್ಭಯಾ ನಿಧಿ ಎಲ್ಲಿಗೆ ಹೋಯಿತು? ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಏಕೆ ಇರಲಿಲ್ಲ? ಎಂದೂ ಅಣ್ಣಾಮಲೈ ಕಿಡಿಕಾರಿದ್ದಾರೆ.
ಅಲ್ಲದೆ ಈ ಘಟನೆ ಖಂಡಿಸಿ ತಮ್ಮ ನಿವಾಸದ ಮುಂದೆ ಚಾಟಿಯಿಂದ ಬಾರಿಸಿಕೊಳ್ಳಲಿದ್ದೇನೆ. ನಾನು ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಅಣ್ಣಾಮಲೈ ಅವರು ಪ್ರತಿಜ್ಞೆ ಮಾಡಿದ್ದು, ಇದನ್ನು ಪಕ್ಷದ ಇತರ ಕಾರ್ಯಕರ್ತರು ಅನುಸರಿಸಬೇಕು ಎಂದು ನಾನು ಒತ್ತಾಯಿಸುವುದಿಲ್ಲ ಎಂದಿದ್ದಾರೆ. ಇನ್ನು ಅಣ್ಣಾಮಲೈ ಅವರು ಮುಂದಿನ 48 ದಿನಗಳ ಕಾಲ ಉಪವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.