ಬೆಳಗಾವಿ: ಸುವರ್ಣ ಸೌಧದಲ್ಲೇ ಬಿಜೆಪಿ MLC ಸಿಟಿ ರವಿಯ ಬಂಧನ
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಬಂಧನವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿರುವ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು, ಸುವರ್ಣಸೌಧದಲ್ಲೇ ಸಿಟಿ ರವಿ ಅವರನ್ನು ಬಂಧಿಸಿದ್ದಾರೆ.
ಬಲವಂತಾಗಿಯೇ ಪೊಲೀಸರು ಸುವರ್ಣಸೌಧದಿಂದ ಸಿಟಿ ರವಿ ಅವರನ್ನು ಎತ್ತಿಕೊಂಡು ಬಂದು ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಇಬ್ಬರು ಎಸ್‌ಪಿ ರ್ಯಾಂಕ್ನ ಅಧಿಕಾರಿಗಳು, ನಾಲ್ಕು ಎಸ್ಕಾರ್ಟ್, ಎರಡು ಕೆಎಸ್‌ಆರ್‌ಪಿ ತುಕಡಿ ಭದ್ರತೆಯಲ್ಲಿ ಸಿಟಿ ರವಿ ಕರೆದುಕೊಂಡು ಹೋಗಲಾಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂದು ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮದೇ ಲೆಟರ್‌ಹೆಡ್ ಮೇಲೆ ಅವಾಚ್ಯಪದ ಬಳಕೆ ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹೀಗಾಗಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆ ವಿರುದ್ಧ ಅಶ್ಲೀಲತೆ ತೋರುವುದು. ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಲೈಂಗಿಕ ಬಣ್ಣದ ಟೀಕೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.