ದಂಪತಿ-ಮಗಳ ಭೀಕರ ಹತ್ಯೆ; ಮಗ ಬಚಾವಾಗಿದ್ದು ಹೇಗೆ ...?

ದಂಪತಿ-ಮಗಳ ಭೀಕರ ಹತ್ಯೆ; ಮಗ ಬಚಾವಾಗಿದ್ದು ಹೇಗೆ ...?

ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ನೆಬ್ ಸರೈನಲ್ಲಿ ಬುಧವಾರ ಬೆಳಿಗ್ಗೆ ವ್ಯಕ್ತಿ, ಅವರ ಪತ್ನಿ ಹಾಗೂ ಮಗಳನ್ನು ಬರ್ಬರವಾಗಿ ಇರಿದು ಹತ್ಯೆ ಮಾಡಲಾಗಿದೆ. ಮುಂಜಾನೆ ವಾಯು ವಿಹಾರಕ್ಕೆ ತೆರಳಿದ್ದ ಅವರ ಮಗ ಬಚಾವಾಗಿದ್ದಾರೆ. ಈ ಘಟನೆ ದಿಲ್ಲಿ ಜನತೆಯನ್ನು ಬೆಚ್ಚಿಬೀಳಿಸಿದೆ. 

ಕೊಲೆಗೀಡಾದ ದುರ್ದೈವಿಗಳನ್ನು ರಾಜೇಶ್ (53), ಅವರ ಪತ್ನಿ ಕೋಮಲ್ (47) ಹಾಗೂ ಅವರ ಮಗಳು 23 ವರ್ಷದ ಕವಿತಾ ಎಂದು ಗುರುತಿಸಲಾಗಿದೆ.

ಈ ದಂಪತಿಯ ಮಗ ಅರ್ಜುನ್ ಅವರು ಬೆಳಿಗ್ಗೆ 5 ಗಂಟೆಗೆ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದರು. ಅವರು ಮರಳಿ ಬಂದಾಗ ಮನೆಯಲ್ಲಿ ಆಘಾತಕಾರಿ ದೃಶ್ಯ ಕಂಡುಬಂದಿದೆ. ಬುಧವಾರ ರಾಜೇಶ್ ಹಾಗೂ ಕೋಮಲ್ ದಂಪತಿಯ ವಿವಾಹ ವಾರ್ಷಿಕೋತ್ಸವದ ದಿನವಾಗಿತ್ತು. ಮನೆಯಲ್ಲಿ ಯಾವುದೇ ದರೋಡೆ ಅಥವಾ ಕಳ್ಳತನದ ಸುಳಿವು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಜೋರಾದ ಸದ್ದು ಕೇಳಿದ್ದರಿಂದ ನೆರೆಹೊರೆಯವರು ಕೂಡಲೇ ಅಲ್ಲಿಗೆ ದೌಡಾಯಿಸಿದ್ದರು. ಬಳಿಕ ಮಗ ಅವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

"ನಾವು ಅವರ ಮನೆಗೆ ತಲುಪಿದಾಗ, ತಾವು ಬೆಳಿಗ್ಗೆ ವಾಕ್‌ಗೆ ತೆರಳಿದ್ದು, ವಾಪಸ್ ಬಂದಾಗ ತನ್ನ ಪೋಷಕರು ಹಾಗೂ ಸಹೋದರಿಯನ್ನು ಇರಿದು ಕೊಂದಿರುವುದು ಕಂಡುಬಂದಿದೆ ಎಂದು ಮಗ ಹೇಳಿದ್ದಾರೆ. ರಕ್ತದ ಕಲೆ ಎಲ್ಲೆಡೆ ಬಿದ್ದಿದೆ" ಎಂದು ಪಕ್ಕದ ಮನೆಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

"ಇಂದು ಅವರ ಮದುವೆ ವಾರ್ಷಿಕೋತ್ಸವವಾಗಿದ್ದು, ಅವರಿಗೆ ಶುಭಾಶಯ ಕೋರಿದ ಬಳಿಕ ಮನೆಯಿಂದ ಹೊರಗೆ ಹೋಗಿದ್ದಾಗಿ ಅರ್ಜುನ್ ತಿಳಿಸಿದ್ದಾರೆ" ಎಂದು ಅವರು ವಿವರಿಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹತ್ಯೆ ಹಿಂದಿನ ಕಾರಣ ಹಾಗೂ ಹಂತಕರ ಪತ್ತೆ ಕುರಿತು ತನಿಖೆ ಆರಂಭಿಸಿದ್ದಾರೆ.

ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ದಿಲ್ಲಿ ನಿವಾಸಿಗಳಿಗೆ ಭದ್ರತೆ ಒದಗಿಸುವ ತನ್ನ ಜವಾಬ್ದಾರಿ ನಿಭಾಯಿಸುವುದರಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ದಿಲ್ಲಿ ಸಿಎಂ ಆತಿಶಿ ಹಾಗೂ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

"ಇಂದು ಬೆಳಿಗ್ಗೆ ನೆಬ್ ಸರೈನಲ್ಲಿ ತ್ರಿವಳಿ ಹತ್ಯೆ ನಡೆದಿದೆ. ದಿಲ್ಲಿಯಲ್ಲಿ ಹಾಡಹಗಲೇ ಕೊಲೆಗಳು ನಡೆಯುತ್ತಿವೆ. ಗುಂಡುಗಳನ್ನು ಹಾರಿಸಲಾಗುತ್ತಿದೆ, ಡ್ರಗ್ಸ್‌ಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಸರಕಾರಕ್ಕೆ ದಿಲ್ಲಿಯಲ್ಲಿ ಇರುವುದು ಒಂದೇ ಒಂದು ಜವಾಬ್ದಾರಿ- ಅದು ದಿಲ್ಲಿ ಜನರಿಗೆ ಭದ್ರತೆ ಒದಗಿಸುವುದು. ಈ ಹೊಣೆಗಾರಿಕೆ ನಿಭಾಯಿಸುವಲ್ಲಿ ಅದು ಸಂಪೂರ್ಣ ವಿಫಲವಾಗಿದೆ" ಎಂದು ಆತಿಶಿ ಕಿಡಿಕಾರಿದ್ದಾರೆ.

"ಒಂದೇ ಮನೆಯಲ್ಲಿ ಮೂರು ಹತ್ಯೆಗಳು ಬಹಳ ನೋವಿನ ಹಾಗೂ ಆತಂಕಕಾರಿ ಘಟನೆ. ಪ್ರತಿದಿನವೂ ದಿಲ್ಲಿ ಜನರು ಅಂತಹ ಭಯಾನಕ ಸುದ್ದಿಗಳನ್ನು ಕೇಳುತ್ತಲೇ ಏಳುತ್ತಿದ್ದಾರೆ. ಕ್ರಿಮಿನಲ್‌ಗಳು ಸ್ವೇಚ್ಛೆಯಿಂದ ತಿರಗುಗಾಡುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಇದಕ್ಕೆ ಜವಾಬ್ದಾರರಾಗಿರಬೇಕಾದವರು ಇದೆಲ್ಲವನ್ನೂ ಮೌನವಾಗಿ ಕುಳಿತು ನೋಡುತ್ತಿದ್ದಾರೆ" ಎಂದು ಮಾಜಿ ಸಿಎಂ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article