ಭೀಮಾ ಕೊರೆಗಾವ್ ಕದನ ದಲಿತರಿಗೆ ಮಾಧರಿ: ಜಯನ್ ಮಲ್ಪೆ
ಉಡುಪಿ: ಹಿಂದುತ್ವದ ಲೂಟಿಕೋರರಿಂದ ಸೃಷ್ಟಿಯಾಗಿರುವ ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧಿಗಳಿಗೆ ಕೊರೆಗಾವಿನಲ್ಲಿ ಕರ್ಮಠ ಮನುವಾದಿ ಬ್ರಾಹ್ಮಣ ಪೇಶ್ವೆ ಸೈನ್ಯದ ವಿರುದ್ಧ ದಲಿತ ಮಹಾರ್ ಸೈನಿಕರು ಯುದ್ಧ ಹೂಡಿ ದಿಗ್ವಿಜಯ ಸಾಧಿಸಿದ ಕದನ ಪ್ರಸ್ತುತ ದಲಿತರಿಗೆ ಮಾಧರಿಯಾಗಲಿ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಇಂದು ಮಲ್ಪೆಯಲ್ಲಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಭೀಮಾ ಕೊರೆಗಾವ್ ವಿಜಯೋತ್ಸವಕ್ಕೆ ಹೊರಟ ನಾಯಕರನ್ನು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಭೀಮಾ ಕೊರೆಗಾಂವ್ ಕದನ ಕೇವಲ ಬ್ರಾಹ್ಮಣ ರಾಜನ ಸೋಲಿಸಿದ ಗೆಲುವಾಗಿರದೆ ಶತಮಾನಗಳ ಅಸ್ಪೃಶ್ಯತಾಚರಣೆಯ ವಿರುದ್ಧದ ಗೆಲುವಾಗಿತ್ತು ಮತ್ತು ಬ್ರಾಹ್ಮಣ ಚಾತುರ್ವರ್ಣ ಧರ್ಮದ ವಿರುದ್ಧದ ಗೆಲುವಾಗಿತ್ತು ಹಾಗೂ ಮೇಲ್ಜಾತಿ ಮೇಲರಿಮೆ ದರ್ಪದ ವಿರುದ್ಧದ ಗೆಲುವಾಗಿರುವುದರಿಂದ ದಲಿತರು ಸಂಭ್ರಮಿಸುವ ದಿನವಾಗಿದೆ ಎಂದರು.
ಹಿರಿಯ ದಲಿತ ನಾಯಕ ದಯಾಕರ್ ಮಲ್ಪೆ ಮಾತನಾಡಿ ಕೊರೆಗಾವ್ ಯುದ್ಧದ ನೆನಪಿಗೆ ಬ್ರಿಟೀಷ್ ಸರಕಾರ ಭೀಮ ಕೊರೆಗಾವ್ ಸ್ತಂಭವನ್ನು ನಿರ್ಮಿಸಿದೆ.ಇದು ಮಹಾರಾಷ್ಟ್ರದಲ್ಲಿ ಇನ್ನೂರು ವರ್ಷಗಳ ಹಿಂದೆ ನಡೆದಿದ್ದ ಇತಿಹಾಸವಗಿದ್ದು ಇಂದು ದಲಿತರಿಗೆ ಶೌರ್ಯದಿನದ ಪ್ರೇರಣೆಯಾಗಿದೆ ಎಂದರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ ಮಹಾರ್ ಸೈನಿಕರ ಸಾಹಸ ಮತ್ತು ಶರ‍್ಯಕ್ಕೆ ಜ್ವಲಂತ ಸಾಕ್ಷಿಯಾದ ಭೀಮಾ ಕೊರೆಗಾವ್ ಯುದ್ದ ದಲಿತ ಸಂವೇದನೆ ಮತ್ತು ಬಹುಜನ ರಾಜಕಾರಣಕ್ಕೆ ಸ್ಪೂರ್ತಿಯಾಗಬೇಕು.ದಲಿತರ ಪ್ರತಿರೋಧದ ಕಾರ್ಯಕ್ರಮವನ್ನು ನಿಷೇಧಿಸಲು ಪ್ರಯತ್ನಿಸುತ್ತಿರುವ ಮನುವಾದಿಗಳಿಗೆ ಕೊರೆಗಾಂವ್ ಇತಿಹಾಸ ಮುಂದಿಟ್ಟು ಹೋರಾಡಬೇಕು ಎಂದರು.
ಭೀಮಾ ಜೊರೆಗಾವ್ ವಿಜಯೋತ್ಸವಕ್ಕೆ ಬಿಳ್ಕೊಡುವ ಕಾರ್ಯಕ್ರವದಲ್ಲಿ ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್,ದೀಪಕ್ ಕೊಡವೂರು,ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮಿನಗರ, ಈಶ್ವರ ಬಿ.ಲಂಬಾಣಿ, ವಿನಯ ಬಲರಾಮನಗರ,ಗುಣವಂತ ತೊಟ್ಟಂ,ಸುಧೀರ್ ಲಂಬಾಣಿ ಮುಂತಾದವರು ಉಪಸ್ಥಿತರಿದ್ದರು. ಭಗವಾನ್ ನೆರ್ಗಿ ಸ್ವಾಗತಿಸಿ, ಪ್ರಸಾದ್ ಮಲ್ಪೆ ವಂದಿಸಿದರು.