ಕಾರ್ಕಳ ತಾಲೂಕು ತಹಶೀಲ್ದಾರರಿಗೆ ಕೊರಗ ಸಂಘಗಳ ಒಕ್ಕೂಟದಿಂದ ಮನವಿ
ಕೊರಗ ಸಂಘಗಳ ಒಕ್ಕೂಟವು ಸಮುದಾಯದ ಪ್ರಮುಖ ಬೇಡಿಕೆಯಾದ ಭೂಮಿಯ ಕುರಿತು ಮನವಿಯನ್ನು ಕಾರ್ಕಳ ತಾಲ್ಲೂಕು ತಹಶೀಲ್ದಾರ್ ಗೆ ಸಲ್ಲಿಸಿವೆ.
ಮುಖ್ಯವಾಗಿ ಬಂಡಿಮಠದಲ್ಲಿರುವ ಹದಿಮೂರು ಕುಟುಂಬಗಳ ನಿವೇಶನ ಹಕ್ಕು ಪತ್ರಕ್ಕಾಗಿ ಮನವಿ ನೀಡಿ ದರ್ಕಾಸು ಭೂಮಿ ಅರ್ಜಿಗಳ ವಿಷಯವಾಗಿ ತಹಶೀಲ್ದಾರವರೊಂದಿಗೆ ಮಾತುಕತೆ ನಡೆಸಲಾಯಿತು.
ಈ ವೇಳೆ ಅವರು ಜನವರಿ 4ರಂದು ಇಲಾಖೆಯ ವತಿಯಿಂದ ನಡೆಸುವ ಅಕ್ರಮ ಸಕ್ರಮ ಸಭೆಯಲ್ಲಿ ಕೊರಗರ ಅರ್ಜಿಗಳನ್ನು ವಿಶೇಷವಾಗಿ ಪರಿಗಣಿಸಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದ್ದಾರೆ. ಮುಂದಿನ ಹತ್ತು ದಿನಗಳ ಬಳಿಕ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಶೀಘ್ರವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ವತಿಯಿಂದ ಪುತ್ರನ್ ಹೆಬ್ರಿ, ನರಸಿಂಹ ಪೆರ್ಡೂರು, ಶೇಖರ್ ಕೆಂಜೂರು, ಅಮರ್ ಪಳ್ಳಿ ಹಾಗೂ ಕಾರ್ಕಳ ಬಂಡಿಮಠದ ಸುನಂದಾ, ಲೀಲಾ, ಲಲಿತಾ, ಚಂದ್ರಾವತಿ, ಶಕುಂತಲಾ, ಗಣೇಶ್, ವಸಂತ, ಪ್ರಸಾದ್, ಶಶಿಕಲಾ ನಕ್ರೆ, ಅಕ್ಕು ತೆಳ್ಳಾರ್ ಮತ್ತು ಇತರರು ಉಪಸ್ಥಿತರಿದ್ದರು.