ಹೆಣ್ಣಿನ ಮಾನ, ಶೀಲದ ಬಗ್ಗೆ ಬಳಸಬಾರದ ಪದ ಬಳಸಿದ ಸಿ ಟಿ ರವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಣ್ಣೀರು ಹಾಕಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ವಿವಾದ ತಾರಕಕ್ಕೇರಿದೆ. ನಿನ್ನೆ ವಿಧಾನ ಪರಿಷತ್ ನಲ್ಲಿ ನಡೆದ ಪ್ರತಿಭಟನೆ, ಈ ವೇಳೆ ಪರಸ್ಪರ ಅವಾಚ್ಯ ಶಬ್ದ ಬಳಕೆ, ನಿಂದನೆಯಿಂದ ಉಂಟಾದ ಜಗಳ ಹಾಗೂ ವಿವಾದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಲು ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ಕರೆದಿದ್ದರು.
ಈ ವೇಳೆ ನಿನ್ನೆ ವಿಧಾನ ಪರಿಷತ್ ನಲ್ಲಿ ನಡೆದ ವಿದ್ಯಮಾನವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಅಂಬೇಡ್ಕರ್ ಅವರಿಗೆ ಅವಮಾನವಾಗುವ ರೀತಿ ಗೃಹ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ್ದರು. ಅದನ್ನ ನಾವು ನಿನ್ನೆ ಖಂಡಿಸಿ ಪ್ರತಿಭಟನೆ ನಡೆಸಿದೆವು. ಏಕೆಂದರೆ ಅಂಬೇಡ್ಕರ್ ಅವರಿಂದಲೇ ನಾವು ಎಂಎಲ್‌ಎ, ಮಂತ್ರಿ ಆಗಲಿಕ್ಕೆ ಸಾಧ್ಯವಾಗಿದೆ.
ಧರಣಿ ಮುಗಿಸಿ ಸೀಟ್ ಮೇಲೆ ಕುಳಿತಿದ್ದೆವು. ಆಗ ಸಿಟಿ ರವಿ ಅವರು ಇದ್ದಕ್ಕಿದ್ದಂತೆ ಬಂದು ರಾಹುಲ್ ಗಾಂಧಿಗೆ ಡ್ರಗ್ ಎಡಿಕ್ಟ್ ಎಂದರು, ಆಗ ನನಗೆ ಕೋಪ ಬಂದು, ತಾವು ಕೂಡ ಆಕ್ಸಿಡೆಂಟ್ ಮಾಡಿದ್ದೀರಿ ನೀವು ಕೊಲೆಗಾರರಾಗ್ತಿರಿ ಅಂದೆ. ಆಗ ಅವರು ನನಗೆ ಹೇಳಬಾರದ ಪದವನ್ನು ಒಂದು ಬಾರಿ ಅಲ್ಲ ಎರಡು ಬಾರಿ ಅಲ್ಲ ಪದೇ ಪದೇ ಹಲವು ಸಲ ಹೇಳಿದ್ರು ಎಂದು ಕಣ್ಣೀರು ಹಾಕಿದರು.
ನಾನು ಇದಕ್ಕೆಲ್ಲಾ ಹೆದರಲ್ಲ ಆದರೆ, ನಾನೊಬ್ಬ ಮಹಿಳೆ, ತಾಯಿ, ಸಹೋದರಿ, ಅತ್ತೆ…. ನನಗೆ ಆ ತರಾ ಹೇಳಿದ್ದಕ್ಕೆ ಅಪಮಾನವಾಗಿದೆ. ಇಲ್ಲಿಯವರೆಗೂ ನಾನು ಒಂದು ಇರುವೆಗೂ ಕಾಟ ಕೊಟ್ಟವಳಲ್ಲ, ಕೆಟ್ಟವರನ್ನ ಕಂಡ್ರೆ ದೂರ ಇರೋಳು… ಆ ವೇದಿಕೆಯಲ್ಲಿ ಎಲ್ಲರೂ ಧೃತರಾಷ್ಟ್ರರಾದರು. ನಮ್ಮ ಪಕ್ಷದವರು ಮಾತ್ರ ನನ್ನ ಬೆನ್ನಿಗೆ ನಿಂತರು ಎಂದು ಹೇಳಿದರು.
ಅಂಬೇಡ್ಕರ್ ಗೆ ಅವಮಾನ ಮಾಡಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ರಾಹುಲ್ ಗಾಂಧಿ ಅವರ ಬಗ್ಗೆ, ನನ್ನ ಬಗ್ಗೆ ಮಾತಾಡ್ತಾರೆ ಅಂದ್ರೆ ಏನು ಅರ್ಥ? ಅವರು ಆ ಪದ ಬಳಕೆ ಮಾಡಿರುವುದರಿಂದ ಬಹಳ ಅವಮಾನ ಆಗಿದೆ. ಆದರೆ ತಾನು ಆ ಪದ ಬಳಕೆಯೇ ಮಾಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ನಾನು ಕೊಲೆಗಡುಕ ಎಂದಿದ್ದು ನಿಜ: ರಾಹುಲ್ ಗಾಂಧಿಯವರನ್ನು ಸುಖಾಸುಮ್ಮನೆ ಎಳೆದು ತಂದು ಡ್ರಗ್ ಅಡಿಕ್ಟ್ ಎಂದಿದ್ದಕ್ಕೆ ನೀವು ಮೂವರನ್ನು ಆಕ್ಸಿಡೆಂಟ್ ಮಾಡಿ ಅವರ ಕೊಲೆಗೆ ಕಾರಣರಾಗಿದ್ದೀರಿ, ನೀವು ಕೊಲೆಗಡುಕ ಎಂದು ನಾನು ಹೇಳಿದ್ದು ನಿಜ. ನಾನು ಆ ಮಾತಿನಿಂದ ಹಿಂದೆ ಸರಿಯುವುದಿಲ್ಲ, ಹೆಣ್ಣಿನ ಮಾನ, ಶೀಲದ ಬಗ್ಗೆ ಬಳಸಬಾರದ ಪದ ಬಳಸಿದ ಸಿ ಟಿ ರವಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾನು ಆ ರೀತಿ ಪದ ಬಳಕೆ ಮಾಡಿಲ್ಲ ಎಂದು ಸಿ ಟಿ ರವಿ ಹೇಳುತ್ತಾರೆ, ಸದನದಲ್ಲಿ ದಾಖಲಾಗದಿರಬಹುದು, ಆದರೆ ಮಾಧ್ಯಮದವರಾದ ನಿಮ್ಮಲ್ಲಿ ಕ್ಲಿಪ್ಪಿಂಗ್ ಇದೆ, ಕಾಂಗ್ರೆಸ್ ಸದಸ್ಯರಿಗೆ ಗೊತ್ತಿದೆ.
10 ಬಾರಿ ಅತ್ಯಂತ ಕೆಟ್ಟ ಪದ ಬಳಸಿ ನನ್ನ ತೇಜೋವಧೆ ಮಾಡಿದರು. ನಾನು ಯಾವುದಕ್ಕೂ ಹೆದರುವುದಿಲ್ಲ. ನನ್ನನ್ನು ನೋಡಿ ಎಷ್ಟೋ ಮಹಿಳೆಯರು ರಾಜಕಾರಣಕ್ಕೆ ಬರಲು ಸ್ಫೂರ್ತಿ ಪಡೆದಿದ್ದಾರೆ. ಆದರೆ ಇಂಥ ಪದಗಳನ್ನು ಸಹಿಸಲು ಹೇಗೆ ಸಾಧ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.
ರಾಜಕಾರಣದಲ್ಲಿ ದ್ವೇಷ ಭಾಷಣಗಳು ಸಾಮಾನ್ಯ. ಆದರೆ, ಇದುವರೆಗೂ ಇಂಥ ನೀಚ ರಾಜಕಾರಣ ನೋಡಿಲ್ಲ. ವಿಧಾನ ಪರಿಷತ್ ಅಂದರೆ ಬುದ್ದಿವಂತರ ಛಾವಡಿ ಅಂತಾರೆ. ಆದರೆ ಅಲ್ಲಿ ಆಗಿದ್ದೇನು?. ಈ ಘಟನೆಯಿಂದ ನಾನು ತುಂಬಾ ಶಾಕ್ ನಲ್ಲಿದ್ದೇನೆ. ಸುದ್ದಿ ತಿಳಿದ ತಕ್ಷಣ ನನ್ನ ಕುಟುಂಬದ ಸದಸ್ಯರು, ಕ್ಷೇತ್ರದ ಜನರು ಫೋನ್ ಮಾಡಿ ಧೈರ್ಯ ತುಂಬಿದರು ಎನ್ನುತ್ತ ಗದ್ಗರಿತರಾದರು.
ವಿಧಾನಸಭೆ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ನಿನ್ನೆ ಕಲಾಪದಲ್ಲಿ ಭಾರೀ ಹೈಡ್ರಾಮ ಉಂಟಾಗಿತ್ತು. ನಿನ್ನೆ ಮಧ್ಯಾಹ್ನ ವಿಧಾನ ಪರಿಷತ್‌ನಲ್ಲಿ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ. ಈ ವೇಳೆ ಬಿಜೆಪಿ ಪರಿಷತ್ ಸದಸ್ಯ ಸಿ ಟಿ ರವಿ ಅವರು ತಮ್ಮ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರೋಪ ಮಾಡಿದ್ದರು. ಸಿಟಿ ರವಿ ಅವರ ಬಂಧನ ಆಗಿ ಇಂದು ನ್ಯಾಯಾಯಕ್ಕೆ ವಿಚಾರಣೆಗೆ ಹಾಜರಾಗಿದ್ದಾರೆ.