ಸಕಲ ಸರ್ಕಾರಿ ಗೌರವಗಳೊಂದಿಗೆ, ಸಿಖ್ ಧರ್ಮದ ಸಂಪ್ರದಾಯದಂತೆ ನಡೆದ ಮನಮೋಹನ್ ಸಿಂಗ್ ಅಂತ್ಯಕ್ರಿಯೆ
ನವದೆಹಲಿ: ದೇಶಕಂಡ ಅಪರೂಪದ ರಾಜಕಾರಣಿ ಹಾಗೂ ದೇಶದ ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರ ಇಂದು ದೆಹಲಿಯ ನಿಗಮ ಬೋಧ್ ಘಾಟ್‌ನಲ್ಲಿ ನಡೆದಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಮತ್ತು ಸಿಖ್ ಧರ್ಮದ ಸಂಪ್ರದಾಯದಂತೆ ಸಿಂಗ್ ಅವರ ಅಂತಿಮ ಸಂಸ್ಕಾರ ನಡೆಯಿತು.
ಮನಮೋಹನ್ ಸಿಂಗ್ ಅವರ ಪುತ್ರಿ ತಮ್ಮ ತಂದೆಯ ಚಿತೆಗೆ ಅಗ್ಮಿ ಸ್ಪರ್ಶ ಮಾಡುವ ಮೂಲಕ ಅಂತಿಮ ಸಂಸ್ಕಾರ ನೆರವೇರಿಸಿದರು. ಈ ವೇಳೆ ಉಪಸ್ಥಿತರಿದ್ದ ನಾಯಕರು ಕಣ್ಣೀರು ಹಾಕುವ ಮೂಲಕ ಅವರಿಗೆ ಅಂತಿಮ ಗೌರವ ಸಲ್ಲಿಕೆ ಮಾಡಿದರು.
ಮನಮೋಹನ್ ಸಿಂಗ್ ಅವರಿಗೆ ಅಂತಿಮ ವಿದಾಯ ಹೇಳಲು ದೆಹಲಿಯ ನಿಗಮಬೋಧ್ ಘಾಟ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ರಾಜ್ಯಗಳ ಸಿಎಂಗಳು ಸಹಿತ ಕೇಂದ್ರ ಸಚಿವರುಗಳು, ಕಾಂಗ್ರೆಸ್ ನಾಯಕರುಗಳು ಹಾಜರಿದ್ದರು. ಈ ಎಲ್ಲಾ ನಾಯಕರು ಅಗಲಿದ ನಾಯಕನಿಗೆ ಪುಷ್ಪ ನಮನ ಸಲ್ಲಿಸಿದರು.
ರಾಷ್ಟ್ರ ನಾಯಕರುಗಳು ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ ಬಳಿಕ, ಮೂರು ಸೇನಾ ಪಡೆಗಳಿಂದ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ನಂತರ ಸಿಂಗ್ ಅವರ ಪಾರ್ಥೀವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಮನಮೋಹನ್ ಸಿಂಗ್ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಬಳಿಕ ಸಿಖ್ ಧರ್ಮದ ಧಾರ್ಮಿಕ ಕ್ರಮದಂತೆ ಶ್ಲೋಕಗಳನ್ನು ಪಠಣೆ ಮಾಡಿ, ಮಧ್ಯಾಹ್ನ 12.55 ಕ್ಕೆ ಸರಿಯಾಗಿ ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.
ನಿಗಮಬೋಧ್ ಘಾಟ್‌ಗೆ ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರ ತಲುಪಿದ ಬಳಿಕ ಅಲ್ಲಿ ಅವರಿಗೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಸಿಂಗ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆಯ ವೇಳೆ ಬಂದಿದ್ದ ಲಕ್ಷಾಂತರ ಮಂದಿ ನಿಗಮಬೋಧ್ ಘಾಟ್‌ನ ಹೊರಭಾಗದಲ್ಲಿ ನರೆದಿದ್ದರು. ದೇಶದ ಮಾಜಿ ಪ್ರಧಾನಿ, ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಭಾರತ ಮಾತ್ರವಲ್ಲದೇ ಇಡೀ ವಿಶ್ವಾದ್ಯಂತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.