ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ಪ್ರಕರಣ; ಮೂವರ ಬಂಧನ

ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ಪ್ರಕರಣ; ಮೂವರ ಬಂಧನ

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಲಕ್ಷ್ಮಿದೇವಿನಗರ ವಾರ್ಡ್ ನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ ಮುನಿರತ್ನ ಅವರ ತಲೆಗೆ ಮೊಟ್ಟೆ ಹೊಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳಕ್ಕೆ ನಂದಿನಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆಗೆ ಕಾಂಗ್ರೆಸ್ ಮುಖಂಡರಾದ ಕುಸುಮಾ ಹಾಗೂ ಹನುಮಂತರಾಯಪ್ಪ ಕಾರಣ ಎಂದು ಆರೋಪಿಸಿರುವ ಮುನಿರತ್ನ, ನನ್ನನ್ನು ಕೊಲೆ ಮಾಡಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸುರೇಶ್ ಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

ಇದು ನನ್ನನ್ನು ಕೊಲ್ಲುವ ಪ್ರಯತ್ನವಾಗಿದೆ. ನನ್ನನ್ನು ಮುಗಿಸಲು ಸುಮಾರು 150 ಜನರನ್ನು ಕರೆಸಿದ್ದಾರೆ. ನನ್ನ ಬೆಂಬಲಿಗರು ಮತ್ತು ಪೊಲೀಸರು ಇಲ್ಲದಿದ್ದರೆ ನನ್ನನ್ನು ಹತ್ಯೆ ಮಾಡುತ್ತಿದ್ದರು. ಡಿಕೆ ಶಿವಕುಮಾರ್, ಡಿಕೆ ಸುರೇಶ್, ಹನುಮಂತರಾಯಪ್ಪ ಸೇರಿದಂತೆ ಕೆಲವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು ಆರೋಪವನ್ನು ತಳ್ಳಿಹಾಕಿದರು. ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ 1924ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿದರು. 

ಮುನಿರತ್ನ ಅವರು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಸುರೇಶ್ ಆರೋಪವನ್ನು ತಳ್ಳಿಹಾಕಿದರು. ಮತ್ತೊಂದೆಡೆ ಗೃಹ ಸಚಿವ ಪರಮೇಶ್ವರ ಅವರು ಪ್ರಕರಣ ಸಂಬಂಧ 'ಮೂವರನ್ನು ಬಂಧಿಸಲಾಗಿದೆ. ಅವರು ಯಾರು ಮತ್ತು ಯಾಕೆ ಹೀಗೆ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದರು.

ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಖಂಡಿಸಿದ್ದಾರೆ. ಇಂತಹ ದಾಳಿ ಮುನಿರತ್ನಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾಡಿದ ಅವಮಾನ. ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣ. ಇಂತಹ ದಾಳಿಗಳು ನಡೆಯುತ್ತಿವೆ. ಸಾರ್ವಜನಿಕ ಪ್ರತಿನಿಧಿ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದು ವಿಜಯೇಂದ್ರ ಹೇಳಿದರು. ಅಷ್ಟೇ ಅಲ್ಲದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಸಿಟಿ ರವಿ ಕೂಡ ಘಟನೆಯನ್ನು ಖಂಡಿಸಿದ್ದಾರೆ.

ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿರುವ ಮುನಿರತ್ನ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Ads on article

Advertise in articles 1

advertising articles 2

Advertise under the article