ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜಯ್ ಶಾ; ಇಂದಿನಿಂದ ಹೊಸ ಅಧ್ಯಾಯ ಆರಂಭ
ಅಬುದಾಬಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ನೂತನ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡಿದ್ದು, ಇಂದಿನಿಂದ ಹೊಸ ಅಧ್ಯಾಯ ಆರಂಭಿಸಿದ್ದಾರೆ.
2024ರ ಆಗಸ್ಟ್ 27ರಂದು ಜಯ್ ಶಾ ಐಸಿಸಿ ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2020ರಿಂದ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ಲೇ ಮೂರನೇ ಅವಧಿಯನ್ನು ಬಯಸದಿರಲು ನಿರ್ಧರಿಸಿದ ನಂತರ ಜಯ್ ಶಾ ಆ ಸ್ಥಾನಕ್ಕೆ ಏಕೈಕ ನಾಮನಿರ್ದೇಶಿತರಾಗಿದ್ದರು.
ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಭಾಷಣ ಮಾಡಿದ ಜಯ್ ಶಾ, ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ, ಮಹಿಳಾ ಕ್ರಿಕೆಟ್ ಆಟದಲ್ಲಿ ಮತ್ತಷ್ಟು ಬೆಳವಣಿಗೆ ತರಬೇಕೆಂಬ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.
ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುತ್ತಿರುವುದು ನನಗೆ ಹೆಮ್ಮೆ. ಐಸಿಸಿ ನಿರ್ದೇಶಕರು ಹಾಗೂ ಸದ್ಯರ ಬೆಂಬಲ ಮತ್ತು ಅಪಾರವಾದ ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ. 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಯಾರಿ ಮಾಡಿಕೊಳ್ಳಲು ಇದು ಉತ್ತಮ ಸಮಯವಾಗಿದೆ. ಇದರಿಂದ ಕ್ರಿಕೆಟ್ ವಿಶ್ವದಾದ್ಯಂತ ಇನ್ನೂ ಹೆಚ್ಚಿನ ಅಭಿಮಾನಿಗಳನ್ನು ಒಳಗೊಳ್ಳಲಿದೆ. ಮುಂದಿನ ಎಲ್ಲ ಅವಕಾಶಗಳನ್ನ ಬಳಸಿಕೊಂಡು ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ICC ತಂಡ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
2009ರಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಸೇರಿದ ಜಯ್ ಶಾ 2019ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಿರಿಯ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇದರೊಂದಿಗೆ ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿ ಪ್ರಮುಖ ಕ್ರಿಕೆಟ್ ಸಂಸ್ಥೆಗಳನ್ನು ಮುನ್ನಡೆಸುವ ಸಾಮರ್ಥ್ಯ ತೋರಿದ್ದರು. ಇದೀಗ 2024ರಲ್ಲಿ ಐಸಿಸಿ ಮುಖ್ಯಸ್ಥರಾಗಿದ್ದಾರೆ.