.jpg)
ಜೀವನ್ಮರಣ ಹೋರಾಟದಲ್ಲಿ ದಾಳಿಗೊಳಗಾಗಿದ್ದ SBI ಭದ್ರತಾ ಸಿಬ್ಬಂದಿ; ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆ ಆಸ್ಪತ್ರೆಗೆ ದೌಡು
ಬೀದರ್‌ನಲ್ಲಿ ನಡೆದ ಎಸ್ ಬಿಐ ಬ್ಯಾಂಕ್ ದರೋಡೆ ದಾಳಿಯಲ್ಲಿ ಗಿರಿ ವೆಂಕಟೇಶ್ ಎಂಬ ಭದ್ರತಾ ಸಿಬ್ಬಂದಿ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದು, ಶಿವಕುಮಾರ್ ಎಂಬ ಮತ್ತೊಬ್ಬ ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಹೈದ್ರಾಬಾದ್‌ನ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸಂದರ್ಭ ಬೆಂಗಳೂರಿನಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಖಂಡ್ರೆಯವರು ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ಬೆಂಗಳೂರಿನಿಂದ ಹೈದ್ರಾಬಾದ್‌ಗೆ ಆಗಮಿಸಿ, ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶಿವಕುಮಾರ್ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ನಂತರ, ಚಿಕಿತ್ಸೆಯ ಕುರಿತು ವೈದ್ಯರೊಂದಿಗೆ ಸುದೀರ್ಘ ಮಾತುಕತೆ ನಡೆಸಿ, ಚಿಕಿತ್ಸೆ ವೆಚ್ಚದ ಬಗ್ಗೆ ಯಾವುದೇ ಚಿಂತೆ ಮಾಡದಂತೆ ಆಶ್ವಾಸನೆ ನೀಡಿ, ಶಿವಕುಮಾರ್ ಅವರಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿದರು ಮತ್ತು ಅವರ ಆರೋಗ್ಯದ ಸ್ಥಿತಿಗತಿಯನ್ನು ವಿವರವಾಗಿ ವಿಚಾರಿಸಿದರು.
ವೈದ್ಯರು ಗಾಯಾಳು ಶಿವಕುಮಾರ್ ಶೀಘ್ರ ಗುಣಮುಖರಾಗುವ ಬಗ್ಗೆ ಭರವಸೆ ನೀಡಿದ್ದಾರೆ. ಈ ದುರಂತದಿಂದ ತೀವ್ರ ಆಘಾತವಾಗಿದ್ದು, ದುರಂತಕ್ಕೆ ಕಾರಣವಾದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ಕುಟುಂಬಸ್ಥರಿಗೆ ನೀಡಿದರು. ಗಾಯಾಳು ಮತ್ತು ಮೃತರ ಕುಟುಂಬಗಳಿಗೆ ಅಗತ್ಯ ಸಕಾಲಿಕ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಇಂದು ಖಂಡ್ರೆ ಅವರು ನಿನ್ನೆಯ ದಾಳಿಯಲ್ಲಿ ಬಲಿಯಾಗಿರುವ ಸಿಬ್ಬಂದಿಯ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ..