
ಫೆಬ್ರವರಿ 9ರ ಬ್ಯಾರಿ ಮೇಳದಲ್ಲಿ 'ತವಕ್ಕಲ್ ಮುಸ್ಲಿಂ' ಆ್ಯಪ್ ಬಿಡುಗಡೆ
Thursday, February 6, 2025
ದುಬೈ: ಫೆಬ್ರವರಿ 9ರ ರವಿವಾರದಂದು ದುಬೈಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಆಶ್ರಯದಲ್ಲಿ ನಡೆಯಲಿರುವ 'ಬ್ಯಾರಿ ಮೇಳ-2025'ರಲ್ಲಿ 'ತವಕ್ಕಲ್ ಓವರ್ಸೀಸ್'ನ ಇಸ್ಲಾಮಿಕ್ ಆ್ಯಪ್ ಬಿಡುಗಡೆ ಆಗಲಿದೆ ಎಂದು ಅಧ್ಯಕ್ಷ ಅಬ್ದುಲ್ ರಝಕ್ ತಿಳಿಸಿದ್ದಾರೆ.
ಈ ಐತಿಹಾಸಿಕ ಮೇಳದಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ದುಬೈಯ ತವಕ್ಕಲ್ ಓವರ್ಸೀಸ್ ಸಂಘಟನೆಯ ಜಾಹೀರಾತು-ಮುಕ್ತ ಇಸ್ಲಾಮಿಕ್ ಅಪ್ಲಿಕೇಶನ್ "ತವಕ್ಕಲ್ ಮುಸ್ಲಿಂ" ಅನ್ನು ಬಿಡುಗಡೆ ಕಾರ್ಯಕ್ರಮ ಕೂಡ ನಡೆಯಲಿದೆ.
ಈ ಆ್ಯಪ್'ನ್ನು ಬ್ಯಾರಿಗಳ ತಂಡವು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್ ಇಸ್ಲಾಮಿನ ಆಧ್ಯಾತ್ಮಿಕ ಪ್ರಯಾಣವನ್ನು ಹೆಚ್ಚಿಸಲು ಮತ್ತು ನಮ್ಮ ಬೆರಳ ತುದಿಯಲ್ಲಿ ಅಮೂಲ್ಯ ಮಾಹಿತಿಯನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್(iOS App) ಆ್ಯಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ ಎಂದು ಅಬ್ದುಲ್ ರಝಕ್ ತಿಳಿಸಿದ್ದಾರೆ.