
ಮುಂಬೈ ದೇವಾಡಿಗ ಸಂಘದ ಶತಮಾನೋತ್ಸವ ಸಮಾರೋಪ ಸಮಾರಂಭ; ಶತಮಾನೋತ್ಸವ ಇತಿಹಾಸ ನಿರ್ಮಿಸುವಂತಾಗಿದೆ: ಐಕಳ ಹರೀಶ್ ಶೆಟ್ಟಿ
ಮುಂಬಯಿ: ದೇವರಿಗೆ ಹತ್ತಿರವಾಗಿರುವ ದೇವಾಡಿಗ ಸಮುದಾಯವು ಬಂಟರ ಸಮಾಜಕ್ಕೂ ತೀರಾ ಹತ್ತಿರವಾಗಿದೆ. ದೇವಾಡಿಗ ಸಮಾಜದ ತುಳುನಾಡಿನವರೇ ಆದ ಡಾ. ವೀರಪ್ಪ ಮೊಯ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಕೇಂದ್ರ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಕರಾವಳಿಯ ಎಲ್ಲಾ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ದೇವಾಡಿಗ ಸಮಾಜ ಎಲ್ಲಾ ಸಮಾಜವನ್ನು ಪ್ರೀತಿಸುವ ಸಮಾಜ. ಮುಂದೆ ಜಾಗತಿಕ ಮಟ್ಟದಲ್ಲಿ ದೇವಾಡಿಗರ ಸಂಘಟನೆಯನ್ನು ಮಾಡುವ ಉದ್ದೇಶವಿದ್ದಲ್ಲಿ ಅದರ ನಿಜಕ್ಕೂ ಅಗತ್ಯವಿದೆ. ನಮ್ಮ ನಾಡಿನ ಎಲ್ಲಾ ಸಮಾಜ ಬಾಂಧವರು ವಿಶ್ವಮಟ್ಟದಲ್ಲಿದ್ದು ಅವರೆಲ್ಲರನ್ನು ಒಂದೆಡೆ ಸೇರಿಸಲು ವಿಶ್ವ ಮಟ್ಟದ ಸಂಘಟನೆಯ ಅಗತ್ಯವಿದೆ. ಗುರುತಿಸಿ ಯುವ ಜನಾಂಗವು ಈ ಸಮಾಜದಲ್ಲಿ ದುಡಿಯುತ್ತಾ ಸಮಾಜವನ್ನು ಮುಂದುವರಿಸುವ ಅಗತ್ಯವಿದೆ. ಇಂದಿನ ಶತಮಾನೋತ್ಸವ ಸಮಾರಂಭ ಇತಿಹಾಸ ನಿರ್ಮಿಸುವಂತಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ದೇವಾಡಿಗ ಸಂಘ ಮುಂಬೈ ಇದರ ಶತಮಾನೋತ್ಸವ ಸಮಾರೋಪ ಸಮಾರಂಭವು ಏಪ್ರಿಲ್ 6 ರಂದು ಕುರ್ಲಾ ಬಂಟರ ಭವನದ ಸಭಾಗ್ರಹದಲ್ಲಿ ಜರಗಿದ್ದು ವಿಶೇಷ ಅಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ದುಬೈಯ ಪಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಮಾತನಾಡುತ್ತಾ, ಶತಮಾನದ ಹಿಂದೆ ದೇವಾಡಿಗ ಸಂಘವನ್ನು ಸ್ಥಾಪಿಸಿದ ಹಿರಿಯರಿಗೆ ಇಂದು ನಾವು ಅಭಿನಂದನೆ ಸಲ್ಲಿಸಬೇಕಾಗಿದೆ. ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದಂತಹ ಈ ದೇವಾಡಿಗ ಸಂಘಕ್ಕೆ ನಿಜವಾಗಿಯೂ ಅಭಿನಂದನೆ ಸಲ್ಲಿಸಬೇಕು. ಸಮುದಾಯ ಭವನದಿಂದ ಸಮಾಜಬಾಂಧವರ ಒಗ್ಗೂಡುವಿಕೆ ಸಾಧ್ಯ. ಕುಂದಾಪುರದಲ್ಲಿ ಈಗಾಗಾಲೇ ಸುರೇಶ್ ಡಿ. ಪಡುಕೋಣೆ ಅವರ ಮುಂದಾಳತ್ವದಲ್ಲಿ ಸಂಘದ ವತಿಯಿಂದ 50 ಸೆಂಟ್ಸ್ ಜಾಗ ಖರೀದಿ ಮಾಡಿದ್ದು ಅಲ್ಲಿ ದೇವಾಡಿಗ ಸಮುದಾಯ ಭವನ ನಿರ್ನಿಸುವ ಅಗತ್ಯತೆಯಿದ್ದು ಸಮಾಜ ಬಾಂಧವರು ಎಲ್ಲರೂ ಸೇರಿ ಇದನ್ನ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುಬೇಕಾಗಿದೆ ಎಂದರು.
ದುಬೈಯ ಉದ್ಯಮಿ ಡಾ. ಡೇವಿಡ್ ಫ್ರ್ಯಾಂಕ್ ಫರ್ನಾಂಡಿಸ್ ಮಾತನಾಡಿ ಮನುಷ್ಯರಿಗೆ ಒಂದೇ ಧರ್ಮ, ಅದು ಮಾನವ ಧರ್ಮ. ನಾವೆಲ್ಲರೂ ನಮ್ಮ ಸಮುದಾಯವನ್ನು ಪ್ರೀತಿಸುವುದರೊಂದಿಗೆ ಮಾನವ ಧರ್ಮವನ್ನು ಪ್ರೀತಿಸೋಣ. ಶತಮಾನೋತ್ಸವ ಆಚರಿಸುತ್ತಿರುವ ದೇವಾಡಿಗ ಸಂಘ ಮುಂಬಯಿಗೆ ಶುಭ ಹಾರೈಸಿದರು.
ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರು ಮಾತನಾಡುತ್ತಾ ನೂರು ವರ್ಷದ ಹಿಂದೆ ದೇವಾಡಿಗ ಸಮಾಜದ ಹಿರಿಯರು ಈ ಸಂಘಟನೆಯನ್ನು ಕಟ್ಟಿ ಸಮಾಜವನ್ನು ಮುನ್ನಡೆಸುವ ಪ್ರಯತ್ನ ನಡೆಸಿದ್ದು ನಿಜಕ್ಕೂ ಅಭಿನಂದನೆಯ. ಇದೇ ರೀತಿ ಮುಂದೆ ಮುಂದೆ ನೂರು ವರ್ಷದ ಬಗ್ಗೆ ದೂರದೃಷ್ಟಿಯನ್ನು ಇಟ್ಟುಕೊಂಡು ಸಮಾಜದ ಮುಂದಿನ ಅಭಿವೃದ್ಧಿಗೆ ಕಾರಣಕರ್ತರಾಗಬೇಕು ಎಂದರು.
ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಮಾತನಾಡುತ್ತಾ, ದೇವಾಡಿಗ ಸಂಘಕ್ಕೆ ಹಾಗೂ ಕರಾವಳಿಯ ಜನತೆಗೆ ದೇವಾಡಿಗ ಸಮಾಜದವರೇ ಆದ ಜನಪ್ರಿಯ ರಾಜಕಾರಣಿ ವೀರಪ್ಪ ಮೊಯ್ಲಿ ಅವರ ಕೊಡುಗೆ ಅಪಾರ ನಾವೆಲ್ಲರೂ ಸೇರಿ ಸಮಾಜದ ಅಭಿವೃದ್ಧಿಗೆ ಒಂದಾಗಿ ಕ್ರಿಯಾಶೀಲರಾಗೋಣ. ಶತಮಾನೋತ್ಸವ ಆಚರಿಸುತ್ತಿರುವ ದೇವಾಡಿಗ ಸಂಘ ಮುಂಬೈಗೆ ಅಭಿನಂದನೆ ಸಲ್ಲಿಸಿದರು.
ಬಂಟರ ಸಂಘ ಮುಂಬೈಯ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಮಾತನಾಡುತ್ತಾ ನೂರು ವರ್ಷದ ಮೊದಲು ದೇವಾಡಿಗ ಸಮಾಜದ ಹಿರಿಯರು ಮುಂಬೈಗೆ ಬಂದು ಇಷ್ಟು ದೊಡ್ಡ ಮಟ್ಟದ ಒಂದು ಸಂಘಟನೆಯನ್ನು ಮಾಡಿ ಶತಮಾನೋತ್ಸವ ಆಚರಿಸುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿ ಎನ್ನುತ್ತಾ ಶುಭ ಹಾರೈಸಿದರು.
ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಮಾತನಾಡುತ್ತಾ, ಮುಂಬಯಿಯಲ್ಲಿ ದೇವಾಡಿಗ ಸಮಾಜವು ವಿವಾದ ರಹಿತ ಸಮಾಜವಾಗಿದ್ದು ಶತಮಾನೋತ್ಸವವನ್ನು ಆಚರಿಸುವ ದೇವಾಡಿಗ ಸಂಘ ಮುಂಬಯಿ ಗೆ ಅಭಿನಂದನೆಗಳು. ಈ ಸಮಾಜ
ಕರ್ನಾಟಕ ರಾಜ್ಯಕ್ಕೆ ಪ್ರಥಮ ಮುಖ್ಯಮಂತ್ರಿಯನ್ನು ನೀಡಿದೆ. ಸಮಾಜದಲ್ಲಿ ಬಡತನದ ರೇಖೆಗಿಂತ ಕೆಳಗಿರುವವರಿಗೆ ಸಹಾಯ ಹಸ್ತವನ್ನು ನೀಡುವಂತ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಕೇಂದ್ರ ಸರಕಾರದ ಮಾಜಿ ಸಚಿವ ಡಾ. ವೀರಪ್ಪ ಮೊಯ್ಲಿ ಮಾತನಾಡುತ್ತಾ, ನನಗೆ ಕುಲ ಶ್ರೇಷ್ಠ ಎಂಬ ಬಿರುದನ್ನು ನೀಡಿದ್ದು ನನ್ನನ್ನು ಶ್ರೇಷ್ಠ ಅಂತ ಮಾಡಿದ್ದು ಮುಂಬೈ ದೇವಾಡಿಗರ ಸಂಘ. ಆದುದರಿಂದ ಇದನ್ನು ನಾನು ಈ ಸಂಘಕ್ಕೆ ಸಮರ್ಪಿಸುತ್ತಿರುವೆ. ಜಿಲ್ಲೆಯಲ್ಲಿನ ಇತರ ಎಲ್ಲಾ ಸಮುದಾಯದವರು ದೇವಾಡಿಗ ಸಮಾಜಕ್ಕೆ ಸೇರಿದ ನನಗೆ ಬೆಂಬಲ ನೀಡಿ ನನ್ನನ್ನು ರಾಜಕೀಯದಲ್ಲಿ ಉನ್ನತ ಮಟ್ಟಕ್ಕೆ ಏರಿಸಿದ್ದಾರೆ. ನಮ್ಮ ಸಮಾಜದ ಹಿರಿಯರ ಪ್ರಯತ್ನದಿಂದಾಗಿ ಇಂದು ದೇಶವಿದೇಶದ ವಿವಿಧ ಭಾಗದಿಂದ ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಇಲ್ಲಿ ಆಗಮಿಸಿ ದೇವಾಡಿಗ ಸಂಘದ ಮುಂಬೈಯ ಶತಮಾನೋತ್ಸವದಲ್ಲಿ ಭಾಗವಹಿಸಿದ್ದು ಸಂಘಕ್ಕೆ ಹಾಗೂ ಇದನ್ನು ಸ್ಥಾಪಿಸಿದ ಎಲ್ಲರಿಗೆ ಅಭಿನಂದನೆಗಳು ಎಂದರು.
ಮಹಾರಾಷ್ಟ್ರ ಸರಕಾರದ ಪ್ರವಾಸೋದ್ಯಮ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ಸಚಿವ, ಮಂಗಲ್ ಪ್ರಭಾತ್ ಲೋಧಾ ಮಾತನಾಡಿ, ಸಮಾರಂಭಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜದ ವಿವಿಧ ಸಾಧಕರನ್ನು ಗೌರವಿಸಲಾಯಿತು. ಸ್ಮರಣ ಸಂಚಿಕೆ ಹಾಗೂ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ ದೇವಾಡಿಗರ ಸಾದನೆ ಬಗ್ಗೆ ಗ್ರಂಥವನ್ನೂ ಬಿಡುಗಡೆಗೊಳಿಸಲಾಯಿತು.
ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ದೇವಾಡಿಗ ಅಧ್ಯಕ್ಷತೆ ವಹಿಸಿದರು. ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ಆಡಳಿತ ನಿರ್ದೇಶಕ ರವಿ ಎಸ್.ಶೆಟ್ಟಿ, ಭವಾನಿ ಶಿಪ್ಪಿಂಗ್ ಸರ್ವಿಸಸ್ ನ ಸಂಸ್ಥಾಪಕ, ಕಾರ್ಯಾಧ್ಯಕ್ಷ ಕುಸುಮೋದರ ಡಿ. ಶೆಟ್ಟಿ ಚೆಲ್ಲಡ್ಕ, ಸಿಎ| ಸದಾಶಿವ ಎಸ್.ಶೆಟ್ಟಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಡ್ ಅಧ್ಯಕ್ಷ ವಿಶ್ವಾಸ್ ಎಂ.ಅತ್ತಾವರ, ಅಭಿಷೇಕ್ ಜನಶಕ್ತಿ ಫೌಂಡೇಶನ್ ನವದೆಹಲಿ ಇದರ ಕಾಯಾಧ್ಯಕ್ಷ ಅನಿಲ್ ಜೈನ್ ದೆಹಲಿ ಶತಮಾನೋತ್ಸವ ಸಮಿತಿಯ ಕಾರ್ಯಧ್ಯಕ್ಷ ಧರ್ಮಪಾಲ್ ದೇವಾಡಿಗ, ಉದ್ಯಮಿ ದುಬೈ ಆಕ್ಮೆ ಸಂಸ್ಥೆಯ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಸಮಿತಿಯ ಇತರ ಗಣ್ಯರಾದ ಹಿರಿಯಡ್ಕ ಮೋಹನ್ ದಾಸ್ , ವಾಸು ಎಸ್ ದೇವಾಡಿಗ, ರವಿ ಎಸ್ ದೇವಾಡಿಗ, ನರೇಶ್ ಎಸ್ ದೇವಾಡಿಗ, ಮಾಲತಿ ಜೆ ಮೊಯಿಲಿ, ವಿಶ್ವನಾಥ್ ಬಿ ದೇವಾಡಿಗ, ಸುರೇಖಾ ಎಚ್ ದೇವಾಡಿಗ, ಸುರೇಶ್ ಆರ್ ದೇವಾಡಿಗ, ನ್ಯಾ. ಪ್ರಭಾಕರ್ ಎಸ್. ದೇವಾಡಿಗ, ನಿತೇಶ್ ದೇವಾಡಿಗ ಜಯಂತಿ ಎಂ ದೇವಾಡಿಗ, ನ್ಯಾ. ಬ್ರಿಜೆಶ್ ಎಸ್ ನೆಟ್ಟೇಕರ್ ಮೊದಲಾದವರು ಉಪಸ್ಥಿತರಿದ್ದರು.
ದೇವಾಡಿಗ ಸಂಘ ಮುಂಬಯಿ ಇದರ ಉಪ ಸಮಿತಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಕಲಾವಿದರು ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿದರು. ದೀಕ್ಷಿತಾ ದೇವಾಡಿಗ, ಶ್ರದ್ಧಾ ಮೊಯಿಲಿ, ಸ್ಪೂರ್ತಿ ಮೊಯಿಲಿ, ತನ್ವಿ ದೇವಾಡಿಗ, ಹರ್ಷ ದೇವಾಡಿಗ, ಅಶ್ವಿನಿ ದೇವಾಡಿಗ ಸೋನಾಲಿ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.
ವರದಿ- ಈಶ್ವರ ಎಂ. ಐಲ್