
ಮಂಗಳೂರಿನ ಹಜ್ ಭವನಕ್ಕೆ 8 ಕೋಟಿ ರೂ. ಮೌಲ್ಯದ 1.80 ಎಕರೆ ಭೂಮಿ ದಾನ ಮಾಡಿದ ಇನಾಯತ್ ಅಲಿ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನೂತನ ಹಜ್ ಭವನ ನಿರ್ಮಾಣಕ್ಕಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಸುಮಾರು 8 ಕೋಟಿ ರೂ. ಮೌಲ್ಯದ 1.80 ಎಕರೆ ಭೂಮಿಯನ್ನು ದಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ದೊರಕದ ಕಾರಣ ನಿರ್ಮಾಣ ಯೋಜನೆ ನೆನೆಗುದಿಗೆ ಬಿದ್ದಿತ್ತು. ಹಜ್ ಭವನದ ಕಟ್ಟಡ ನಿರ್ಮಾಣಕ್ಕೆ ಸರಕಾರ ಈಗಾಗಲೇ 15 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿಲಾಗಿದ್ದು, ಆ ಹಣ ರಾಜ್ಯ ಹಜ್ ಸಮಿತಿಯ ಖಾತೆಯಲ್ಲಿದೆ. ಆದರೆ ಸೂಕ್ತ ಜಾಗ ಸಿಗದ ಹಿನ್ನೆಲೆಯಲ್ಲಿ ಹಜ್ ಭವನ ನಿರ್ಮಾಣ ಕಾರ್ಯ ವಿಳಂಬವಾಗಿದ್ದು, ಈ ಹಿನ್ನೆಲೆಯಲ್ಲಿ ಇನಾಯತ್ ಅಲಿ ಅವರು ತನ್ಮ ಸ್ವಂತ ಜಾಗವನ್ನು ರಾಜ್ಯ ಹಜ್ ಕಮಿಟಿಗೆ ದಾನ ನೀಡಿದ್ದಾರೆ.
ಬುಧವಾರ ದಾನವಾಗಿ ನೀಡಿದ ಜಾಗ ಹಜ್ ಸಮಿತಿಗೆ ನೋಂದಾವಣಿಯಾಗಿದೆ. ಮಂಗಳೂರು ತಾಲೂಕು ಕಂದಾಯ ಕಚೇರಿಯಲ್ಲಿ ನೋಂದಾಣಿ ಕಾರ್ಯ ನಡೆಯಿತು. ಈ ವೇಳೆ ಇನಾಯತ್ ಅಲಿ ಸಹೋದರರು ದಾನವಾಗಿ ನೀಡಿದ ದಾಖಲೆ ಪತ್ರಗಳಿಗೆ ಸಹಿ ಮಾಡಿದರು. ಈ ವೇಳೆ ರಾಜ್ಯ ಹಜ್ ಸಮಿತಿ ಚೇರ್ಮನ್ ಝುಲ್ಫಿಕರ್ ಅಹ್ಮದ್ ಖಾನ್ ಟಿಪ್ಪು ಮತ್ತು ಹಜ್ ಕಮಿಟಿ ಇ.ಒ ಸರ್ಫ್‌ರಾಝ್ ಖಾನ್ ಹಾಗೂ ಮಂಗಳೂರಿನ ಪ್ರಮುಖ ಮುಸ್ಲಿಂ ಮುಖಂಡರು ಹಾಜರಿದ್ದರು.
ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣದಿಂದ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳಿಂದ ಹಜ್ ಯಾತ್ರೆ ಕೈಗೊಳ್ಳುವವರಿಗೆ ಬಹಳಷ್ಟು ಸಹಾಯವಾಗಲಿದೆ.