ನಾಳೆ ಸರ್ವಧರ್ಮ ಗುರುಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಮೂಳೂರು- ಅಡ್ಡೂರು ಜೋಡುಕರೆ ಕಂಬಳ: ಇನಾಯತ್ ಅಲಿ

ನಾಳೆ ಸರ್ವಧರ್ಮ ಗುರುಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಮೂಳೂರು- ಅಡ್ಡೂರು ಜೋಡುಕರೆ ಕಂಬಳ: ಇನಾಯತ್ ಅಲಿ

ಮಂಗಳೂರು : ಗುರುಪುರದ ಮಾಣಿಬೆಟ್ಟುಗುತ್ತಿನ ಎದುರು ಗದ್ದೆಯಲ್ಲಿ ಎ.12ರಂದು ನಡೆಯಲಿರುವ ದ್ವಿತೀಯ ವರ್ಷದ ಮೂಳೂರು- ಅಡ್ಡೂರು ಜೋಡುಕರೆ ಕಂಬಳೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ದ.ಕ. ಜಿಲ್ಲೆಯಲ್ಲಿ ಈ ಋತುಮಾನದ ಕೊನೆಯ ಹೊನಲು ಬೆಳಕಿನ ಕಂಬಳವನ್ನು ವಿಶಿಷ್ಟವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್ ಅಲಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗ್ಗೆ 8.30ಕ್ಕೆ ಕಂಬಳದ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನೆರವೇರಿಸುವರು. ಸರ್ವಧರ್ಮ ಗುರುಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಕಂಬಳದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ, ಗುರುಪುರ ಪೊಂಪೈ ಚರ್ಚ್‌ನ ಧರ್ಮಗುರು ವಂ.ರೊಡಾಲ್ಫ್ ರವಿ ಡೇಸಾ, ಕೈಕಂಬ ಅಸ್ರಾರುದ್ದೀನ್ ಮಸೀದಿಯ ಧಾರ್ಮಿಕ ಗುರು ಅಬ್ದುಲ್ ಕಬೀರ್ ದಾರಿಮಿ ಭಾಗವಹಿಸಲಿದ್ದಾರೆ ಎಂದರು.

ಹಲವು ವಿಶೇಷತೆಗಳೊಂದಿಗೆ ನಡೆಯಲಿರುವ ಕಂಬಳದಲ್ಲಿ ಜರ್ಮನ್ ತಂತ್ರಜ್ಞಾನದ ಟೆಂಟ್ ಅಳವಡಿಕೆ, ಡಿಜಿಟಲ್ ವೇದಿಕೆಯನ್ನು ರಚಿಸಲಾಗುತ್ತಿದೆ. ಕಂಬಳದ ಜತೆ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ‘ಯಕ್ಷ ವಸುಂಧರ’ ಎಂಬ ಯಕ್ಷೋತ್ಸವ ಬೆಳಗ್ಗೆ 10ರಿಂದ ಆರಂಭಗೊಳ್ಳಲಿದೆ. ಹಿರಿಯ ಹಿಮ್ಮೇಳ ವಾದಕ ಹಾಗೂ ಯಕ್ಷ ಗುರು ದಿ. ಜಿ.ಟಿ. ಅಣ್ಣು ಭಟ್ ಅವರ ಸ್ಮರಣಾರ್ಥ ಹಿರಿಯರ ನೆನಪು ಕಾರ್ಯಕ್ರಮ, ತೆಂಕುತಿಟ್ಟು ಯಕ್ಷಗಾನ ಸ್ಥಿತ್ಯಂತರಗಳು ವಿಷಯದಲ್ಲಿ ವಿಚಾರಗೋಷ್ಠಿ, ತಾಳಮದ್ದಳೆ ಹಾಗೂ ಅಹೋರಾತ್ರಿ ಯಕ್ಷಗಾನವನ್ನು ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಸ್ಥಾಪಕ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಮುಂಬೈ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ, ಸಮಿತಿಯ ಪದಾಧಿಕಾರಿಗಳಾದ ಸುರೇಂದ್ರ ಕಂಬಳಿ, ಮೆಲ್ವಿನ್, ಯಶವಂತ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ವಿನಯ್ ಶೆಟ್ಟಿ, ಜಯಶೀಲ ಅಡ್ಯಂತಾಯ ಇನ್ನಿತರರು ಉಪಸ್ಥಿತರಿದ್ದರು.

69 ಪದಕ ವೀರ ದೂಜನಿಗೆ ಸನ್ಮಾನ;ಅಂಚೆ ಚೀಟಿ ಬಿಡುಗಡೆ

ದ.ಕ. ಜಿಲ್ಲೆಯಲ್ಲಿ ಈ ಋತುಮಾನದ ಕೊನೆಯ ಕಂಬಳ ಇದಾಗಿದ್ದು, ಸಂಜೆ 6.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸುವರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತರಿರುವರು. 200ಕ್ಕೂ ಅಧಿಕ ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಂಬಳ ಕ್ಷೇತ್ರದಲ್ಲಿ ತನ್ನ ಓಟದ ಸಾಮರ್ಥ್ಯದಿಂದ ಛಾಪು ಮೂಡಿಸಿರುವ, 69 ಪದಕ ವಿಜೇತ ದೂಜ ಕೋಣನಿಗೆ ಸನ್ಮಾನ ಹಾಗೂ ಅಂಚೆ ಇಲಾಖೆಯಿಂದ ದೂಜ ಕುರಿತ ಅಂಚೆ ಚೀಟಿ ಬಿಡುಗಡೆ ನಡೆಯಲಿದೆ. ಭಾಗವಹಿಸುವ ಪ್ರತಿ ಕೋಣಗಳಿಗೆ ಬೆಳ್ಳಿಯ ನಾಣ್ಯ ನೀಡಲಾಗವುದು. ಕಂಬಳವು ಜಾತಿ, ಮತ ಧರ್ಮದ ಬೇಧವಿಲ್ಲದೆ ನಡೆಯುತ್ತಿದ್ದು, ಹಲವು ಸೆಲೆಬ್ರಿಟಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ತಿಳಿಸಿದರು.


Ads on article

Advertise in articles 1

advertising articles 2

Advertise under the article