
ಸಂಡೂರು ಜೈಸಿಂಗಪುರ ಬಳಿ ಟಿಪ್ಪರ್-ಕಾರು ಅಪಘಾತ; ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು
ಬಳ್ಳಾರಿ: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜೈಸಿಂಗಪುರ ಬಳಿ ಸಂಭವಿಸಿದೆ.
ಸಂಡೂರು ತಾಲೂಕಿನ ಲಕ್ಷ್ಮೀಪುರದ ಆಶಾ (28), ಜಯಲಕ್ಷ್ಮಿ (21), ಸ್ವಾತಿ (5) ಹಾಗೂ ಬಿಂಧುಶ್ರೀ (4) ಮೃತರು. ಕಾರು ಚಲಾಯಿಸ್ತಿದ್ದ ರಮೇಶ್ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಸ್ವಗ್ರಾಮ ಲಕ್ಷ್ಮೀಪುರದಿಂದ ಹೊಸಪೇಟೆ ಆಸ್ಪತ್ರೆಗೆ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಸಂಡೂರಿನ ಜೈಸಿಂಗಪುರ ಬಳಿ ಮೈನಿಂಗ್ ಟಿಪ್ಪರ್ ಓವರ್ ಟೇಕ್ ಮಾಡಲು ಹೋಗಿ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಸಂಡೂರು ಪೊಲೀಸರು ದೌಡಾಯಿಸಿ, ಮೃತದೇಹಗಳನ್ನ ಸಂಡೂರು ತಾಲೂಕು ಆಸ್ಪತ್ರೆಗೆ ರವಾನಿಸಿದರು. ಆಸ್ಪತ್ರೆಗೆ ಮೃತದೇಹಗಳು ಬರ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.