
ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಬಿಚ್ಚಿಟ್ಟ ಮಾಹಿತಿ ನೋಡಿ...
ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಒಟ್ಟು 8 ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಂಧಿತರ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದ್ದೇನು?
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ಗುರುತಿಸಲಾಗಿದ್ದು, 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಬ್ದುಲ್ ಸಫ್ವಾನ್ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ. 2023ರಲ್ಲಿ ತಂಡವೊಂದು ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಸುಹಾಸ್ ಶೆಟ್ಟಿ ತಂಡದಿಂದ ಹತ್ಯೆಯಾಗುವ ಆತಂಕ ಇದ್ದಿದ್ದರಿಂದ ಸುಹಾಸ್ ಶೆಟ್ಟಿಯ ಹತ್ಯೆಗೆ ಸಫ್ವಾನ್ ತೀರ್ಮಾನಿಸಿದ್ದ. ಈ ಹಿನ್ನಲೆ ಸಫ್ವಾನ್ 2022 ರಲ್ಲಿ ಕೊಲೆಯಾದ ಫಾಝಿಲ್ ಸಹೋದರ ಆದಿಲ್ ನನ್ನು ಸಂಪರ್ಕಿಸಿದ್ದಾನೆ. ಸುಹಾಸ್ ಹತ್ಯೆಗೆ ಆದಿಲ್ 5 ಲಕ್ಷ ರೂ. ಕೊಡುವ ಭರವಸೆ ನೀಡಿ, 3 ಲಕ್ಷ ರೂ. ಮುಂಗಡ ಪಾವತಿಸಿದ್ದ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.
ನಿಯಾಝ್ ಎಂಬಾತ ತನ್ನ ಸ್ನೇಹಿತರಾದ ನಾಗರಾಜ್ ಮತ್ತು ರಂಜಿತ್ ಎಂಬವರನ್ನು ಸಂಪರ್ಕ ಮಾಡಿದ್ದಾನೆ. ಆರೋಪಿಗಳು ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಹತ್ಯೆ ನಡೆಸಿದ್ದಾರೆ ಎಂದು ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಬಂಧಿತರು...
ಶಾಂತಿಗುಡ್ಡೆ ಪೇಜಾವರ ಗ್ರಾಮದ ನಿವಾಸಿ ಅಬ್ದುಲ್ ನಾಸಿರ್ ಅವರ ಪುತ್ರ ಅಬ್ದುಲ್ ಸಫ್ವಾನ್ (29). ಈತ ಚಾಲಕನಾಗಿ ದುಡಿಯುತ್ತಿದ್ದ.
ಬಜ್ಪೆ ನಿವಾಸಿ ಅಬೂಬಕ್ಕರ್ ಅವರ ಪುತ್ರ ನಿಯಾಝ್ (28). ಈತ ಮೇಸ್ತ್ರಿ ಹೆಲ್ಪರ್ ಕೆಲಸ ಮಾಡುತ್ತಿದ್ದ.
ಕೆಂಜಾರು ನಿವಾಸಿ ಅಬ್ದುಲ್ ರಝಾಕ್ ಅವರ ಪುತ್ರ ಮುಹಮ್ಮದ್ ಮುಝಮ್ಮಿಲ್ (32). ಸೌದಿ ಅರೇಬಿಯಾ ದಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈತ ಕಳೆದ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದಾನೆ.
ಕಳವಾರು ನಿವಾಸಿ ಮುಹಮ್ಮದ್ ಅವರ ಪುತ್ರ ಕಲಂದರ್ ಶಾಫಿ (31). ಈತ ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿ ದುಡಿಯುತ್ತಿದ್ದ.
ಚಿಕ್ಕಮಗಳೂರಿನ ಕಳಸ ನಿವಾಸಿ ರಾಜೇಶ್ ಅವರ ಪುತ್ರ ರಂಜಿತ್ (19). ಈತ ಚಾಲಕನಾಗಿ ದುಡಿಯುತ್ತಿದ್ದ.
ಚಿಕ್ಕಮಗಳೂರಿನ ಕಳಸ ನಿವಾಸಿ ಮಾರಿ ಮುತ್ತು ಅವರ ಪುತ್ರ ನಾಗರಾಜ್ (20). ಈತ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ.
ಜೋಕಟ್ಟೆ ನಿವಾಸಿ ಅಬ್ದುಲ್ ಮಜೀದ್ ಅವರ ಪುತ್ರ ಮುಹಮ್ಮದ್ ರಿಝ್ವಾನ್ (28). ಈತ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ.
ಉಮರುಲ್ ಫಾರೂಕ್ ಅವರ ಪುತ್ರ ಆದಿಲ್ ಮೆಹರೂಫ್. ಈತ 2022 ರಲ್ಲಿ ಕೊಲೆಯಾದ ಫಾಝಿಲ್ ಅವರ ಸಹೋದರ.