
ಭಾರತದಲ್ಲಿ 24 ಕೋಟಿಗೂ ಅಧಿಕ ಹೆಮ್ಮೆಯ ಮುಸ್ಲಿಮರಿದ್ದಾರೆ; ಭಾರತದೊಂದಿಗಿನ ಸಂಘರ್ಷವನ್ನು ಹಿಂದೂ-ಮುಸ್ಲಿಂ ಸಂಘರ್ಷವಾಗಿ ಬಿಂಬಿಸುವ ಪಾಕಿಸ್ತಾನದ ಅಪಪ್ರಚಾರದ ವಿರುದ್ಧ ಅಸದುದ್ದೀನ್ ಉವೈಸಿ ಆಕ್ರೋಶ
ಹೊಸದಿಲ್ಲಿ: ಭಾರತದೊಂದಿಗಿನ ಸಂಘರ್ಷವನ್ನು ಹಿಂದೂ-ಮುಸ್ಲಿಂ ಸಂಘರ್ಷವಾಗಿ ಬಿಂಬಿಸುವ ಪಾಕಿಸ್ತಾನದ ಅಪಪ್ರಚಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ, ಭಾರತದಲ್ಲಿ 24 ಕೋಟಿಗೂ ಅಧಿಕ ಹೆಮ್ಮೆಯ ಮುಸ್ಲಿಮರು ವಾಸಿಸುತ್ತಿದ್ದಾರೆ ಮತ್ತು ಭಾರತದಲ್ಲಿ ಅನೇಕ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರಿದ್ದಾರೆ ಎಂದು ಹೇಳಿದ್ದಾರೆ.
ಅಸದುದ್ದೀನ್ ಉವೈಸಿ ಭಯೋತ್ಪಾದನೆಯ ವಿರುದ್ಧ ಜಾಗತಿಕ ಅಭಿಪ್ರಾಯ ರೂಪಿಸುವ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಯೋತ್ಪಾದನೆ ಬಗ್ಗೆ ಭಾರತದ ರಾಜತಾಂತ್ರಿಕ ನಿಲುವು ವ್ಯಕ್ತಪಡಿಸಲು ಗಲ್ಫ್ ರಾಷ್ಟ್ರಗಳಿಗೆ ತೆರಳಿದ ಭಾರತದ ಸರ್ವಪಕ್ಷ ನಿಯೋಗದ ಭಾಗವಾಗಿದ್ದರು.
ಸೌದಿ ಅರೇಬಿಯಾದಲ್ಲಿ ಮಾತನಾಡಿದ ಅಸದುದ್ದೀನ್ ಉವೈಸಿ, ನಾವು ಮುಸ್ಲಿಂ ದೇಶ ಮತ್ತು ಭಾರತ ಅಲ್ಲ ಎಂಬ ತಪ್ಪು ಸಂದೇಶವನ್ನು ಪಾಕಿಸ್ತಾನ ಅರಬ್ ಜಗತ್ತಿಗೆ ಮತ್ತು ಮುಸ್ಲಿಂ ರಾಷ್ಟ್ರಗಳಿಗೆ ನೀಡುತ್ತಿರುವುದು ಅತ್ಯಂತ ದುರದೃಷ್ಟಕರ. ಭಾರತದಲ್ಲಿ 24 ಕೋಟಿ ಹೆಮ್ಮೆಯ ಭಾರತೀಯ ಮುಸ್ಲಿಮರು ವಾಸಿಸುತ್ತಿದ್ದಾರೆ. ಜಗತ್ತಿನ ಯಾವುದೇ ವಿದ್ವಾಂಸರಿಗಿಂತ ಉತ್ತಮ ಇಸ್ಲಾಮಿಕ್ ವಿದ್ವಾಂಸರು ಭಾರತದಲ್ಲಿದ್ದಾರೆ. ಅವರು ಅರೇಬಿಕ್ ಭಾಷೆಯನ್ನು ಉತ್ತಮವಾಗಿ ಮಾತನಾಡಬಲ್ಲರು. ಮುಸ್ಲಿಂ ದೇಶವಾಗಿರುವುದರಿಂದ ಅವರಿಗೆ ಭಾರತ ನೋವುಂಟು ಮಾಡುತ್ತಿದೆ ಎಂಬುದು ಪಾಕಿಸ್ತಾನದ ಸುಳ್ಳು ಪ್ರಚಾರವಾಗಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ, ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸಲಿದೆ ಎಂದು ಹೇಳಿದರು.