ಅಬ್ದುಲ್ ರಹ್ಮಾನ್ ಹತ್ಯೆ; ನಾಲ್ವರ ಬಂಧನ: ಕರಾವಳಿಯನ್ನು "ಸೂಕ್ಷ್ಮ" ಎಂದು ಪರಿಗಣಿಸಿದ್ದೇವೆ: ಗೃಹ ಸಚಿವ ಪರಮೇಶ್ವರ್

ಅಬ್ದುಲ್ ರಹ್ಮಾನ್ ಹತ್ಯೆ; ನಾಲ್ವರ ಬಂಧನ: ಕರಾವಳಿಯನ್ನು "ಸೂಕ್ಷ್ಮ" ಎಂದು ಪರಿಗಣಿಸಿದ್ದೇವೆ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ 32 ವರ್ಷದ  ಅಬ್ದುಲ್ ರಹ್ಮಾನ್ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮುಲಾಜಿಲ್ಲದೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಗುರುವಾರ ಹೇಳಿದ್ದಾರೆ.

ರಾಜ್ಯ ಸರ್ಕಾರ ಈ ಹತ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ಅಂತಹ ಕೋಮು ಚಟುವಟಿಕೆಗಳು ಹಾಗೂ ಕೊಲೆಗಳನ್ನು ನಿಗ್ರಹಿಸುವವರೆಗೆ ತಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ತಕ್ಷಣ ಜಾರಿಗೆ ಬರುವಂತೆ ಕೋಮು ವಿರೋಧಿ ಪಡೆ ರಚಿಸುವ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ಪರಮೇಶ್ವರ ಹೇಳಿದ್ದಾರೆ.

"ಕೊಲೆಯ ನಂತರ ನಾಲ್ವರನ್ನು ಬಂಧಿಸಲಾಗಿದೆ ಮತ್ತು ಅವರ ಹೇಳಿಕೆಗಳ ಆಧಾರದ ಮೇಲೆ ನಮಗೆ ಕೆಲವು ಗಂಭೀರ ಮಾಹಿತಿ ಸಿಕ್ಕಿದೆ. ಅದನ್ನು ಬಳಸಿಕೊಂಡು ಮುಂದಿನ ತನಿಖೆ ಮತ್ತು ಕ್ರಮ ಕೈಗೊಳ್ಳಲಾಗುವುದು" ಎಂದು ಪರಮೇಶ್ವರ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, "ಯಾರೇ ಆಗಿರಲಿ ಯಾವುದೇ ಮುಲಾಜಿಲ್ಲದೇ ನಾವು ನಿರ್ದಯವಾಗಿ ಕ್ರಮ ಕೈಗೊಳ್ಳುತ್ತೇವೆ. ಏಕೆಂದರೆ ಇಂತಹ ಘಟನೆಗಳು ಪ್ರತಿ ಬಾರಿಯೂ ನಡೆಯುತ್ತಿದ್ದರೆ, ನಾವು ಕಣ್ಣು ಮುಚ್ಚಿ ಸುಮ್ಮನಿರಲು ಸಾಧ್ಯವಿಲ್ಲ. ಯಾವುದೇ ಕರುಣೆಯಿಲ್ಲದೆ ನಾವು ಕಾನೂನನ್ನು ಕಠಿಣಗೊಳಿಸುತ್ತೇವೆ" ಎಂದು ಪರಮೇಶ್ವರ ಎಚ್ಚರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೋಮು ಚಟುವಟಿಕೆಗಳು ನಡೆಯುವ ಇತರ ಸ್ಥಳಗಳನ್ನು ಒಳಗೊಂಡ ಕರಾವಳಿ ಪ್ರದೇಶವನ್ನು "ಸೂಕ್ಷ್ಮ" ಎಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ನಿರ್ದಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕರಾವಳಿಯಲ್ಲಿ ವಾತಾವರಣ ಹಾಳಾಗಿದೆ. "ಒಂದು ಕಡೆ ಕೊಲೆ ಮಾಡಿದರೆ, ಇನ್ನೊಂದು ಕಡೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ಅಂತಹ ವಿಷಯಗಳು ಪುನರಾವರ್ತನೆಯಾಗುತ್ತವೆ. ಅಂತಹ ದ್ವೇಷದ ಭಾವನೆ ಇದ್ದರೆ, ಸಮಾಜ ಹೇಗೆ ಉಳಿಯುತ್ತದೆ. ಯಾರಾದರೂ ಜೀವನ ನಡೆಸಲು ಸಾಧ್ಯವೇ? ಸರ್ಕಾರ ಮೂಕ ಪ್ರೇಕ್ಷಕರಾಗಿ ಮೌನವಾಗಿ ಕುಳಿತುಕೊಳ್ಳುವುದಿಲ್ಲ, ನಾವು ಅದನ್ನು ತಡೆಯುತ್ತೇವೆ" ಎಂದು ಹೇಳಿದರು.

ಇಂತಹ ಘಟನೆಗಳನ್ನು ಎದುರಿಸಲು ಮೊದಲೇ ಘೋಷಿಸಲಾದ ಕೋಮು ವಿರೋಧಿ ಪಡೆಯ ರಚನೆಯ ಬಗ್ಗೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಲಾಗಿದೆ.

"ಅದನ್ನು ಹೇಗೆ ರಚಿಸುವುದು, ಯಾರು ಅದರ ನೇತೃತ್ವ ವಹಿಸುತ್ತಾರೆ, ಅವರಿಗೆ ಯಾವ ಅಧಿಕಾರ ನೀಡಬೇಕು - ಆ ಎಲ್ಲಾ ವಿಷಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಯ ಹಿಡಿಯಿತು. ನಾವು ಅಂತಿಮವಾಗಿ ಆದೇಶ ಹೊರಡಿಸಿದ್ದೇವೆ. ನಾವು ನಕ್ಸಲ್ ವಿರೋಧಿ ಪಡೆಯನ್ನು ವಿಸರ್ಜಿಸಲು ಯೋಜಿಸಿದ್ದೇವೆ. ಆ ನಕ್ಸಲ್ ವಿರೋಧಿ ಪಡೆಯ ಅರ್ಧದಷ್ಟು ಭಾಗವನ್ನು ಕೋಮು ವಿರೋಧಿ ಪಡೆಯಾಗಿ ಪರಿವರ್ತಿಸಲಾಗಿದೆ. ಅಗತ್ಯವಿರುವ ಎಲ್ಲಾ ಅಧಿಕಾರ ಮತ್ತು ಸೌಲಭ್ಯಗಳನ್ನು ಅವರಿಗೆ ಒದಗಿಸಲಾಗುವುದು" ಎಂದು ಗೃಹ ಸಚಿವರು ತಿಳಿಸಿದರು.

"ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ - ಮೂರು ಜಿಲ್ಲೆಗಳಲ್ಲಿ ಹೆಚ್ಚಿನ ಗಮನ ಹರಿಸಿ ಅವು ಪ್ರಾರಂಭವಾಗಲಿವೆ" ಎಂದು ಅವರು ಹೇಳಿದರು.

ದಕ್ಷಿಣ ಕನ್ನಡದಲ್ಲಿ ಕೋಮು ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಗೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಶಾಂತಿ ಮತ್ತು ಸಮುದಾಯ ಸಭೆಗಳನ್ನು ನಡೆಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

Ads on article

Advertise in articles 1

advertising articles 2

Advertise under the article