
ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ ಶುಭಾಂಶು ಶುಕ್ಲಾ ಬಂಧನ
ಬೆಂಗಳೂರು: ಇಲ್ಲಿನ ವೈಟ್‌ಫೀಲ್ಡ್ ಪ್ರದೇಶದ ಪ್ರಶಾಂತ್ ಲೇಔಟ್‌ನ ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಛತ್ತೀಸ್‌ಗಢ ಮೂಲದ 26 ವರ್ಷದ ಶುಭಾಂಶು ಶುಕ್ಲಾ ಎಂದು ಗುರುತಿಸಲಾಗಿದೆ. ಆತ ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ.
ಆರೋಪಿಯು ಮೇ 9ರ ಮಧ್ಯರಾತ್ರಿ 12.30 ರ ಸಮಯದಲ್ಲಿ, ಪಿಜಿಯಲ್ಲಿದ್ದ ಇತರ ಯುವಕರು ‘ಆಪರೇಷನ್ ಸಿಂಧೂರ್’ ಯಶಸ್ಸನ್ನು ಸಂಭ್ರಮಿಸುತ್ತಿದ್ದ ವೇಳೆ ಬಾಲ್ಕನಿಯಲ್ಲಿ ನಿಂತು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾನೆ ಎಂದು ತಿಳಿದುಬಂದಿದೆ.
ಪಾಕ್ ವಿರುದ್ಧ ಭಾರತೀಯ ಸೇನಾ ಪಡೆಯ ಕಾರ್ಯಾಚರಣೆಯ ಯಶಸ್ಸನ್ನು ಮೇ 9ರಂದು ಪ್ರಶಾಂತ್ ಲೇಔಟ್‌ನಲ್ಲಿ ಯುವಕರು ಸಂಭ್ರಮಿಸುತ್ತಿದ್ದರು. ಈ ವೇಳೆ ಪಿ.ಜಿಯ ಬಾಲ್ಕನಿಯಲ್ಲಿ ನಿಂತಿದ್ದ ಶುಭಾಂಶು ಶುಕ್ಲಾ, ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ಆರೋಪಿಸಲಾಗಿದೆ.
ಪಾಕ್ ಪರ ಘೋಷಣೆ ಕೂಗುತ್ತಿರುವುದನ್ನು ಕೇಳಿಸಿಕೊಂಡ ಯುವಕರು ಗಾಬರಿಗೊಂಡಿದ್ದಾರೆ. ಈ ವೇಳೆ ಸುತ್ತಲೂ ಗಮನಿಸಿದಾಗ ಇಬ್ಬರು ಯುವಕರು ಬಾಲ್ಕನಿಯಲ್ಲಿ ನಿಂತಿರುವುದು ಕಾಣಿಸಿದೆ. ನಂತರ ಅಲ್ಲಿದ್ದ ಯುವಕರು ತುರ್ತು ಸಹಾಯವಾಣಿ ಕರೆಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ವೈಟ್‌ಫೀಲ್ಡ್ ಠಾಣೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ ಶುಭಾಂಶು ಶುಕ್ಲಾ ಪಾಕ್ ಪರ ಘೋಷಣೆ ಕೂಗಿರುವುದು ಖಚಿತವಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ಶುಭಾಂಶು ಶುಕ್ಲಾ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ, ಸದ್ಯ ಪ್ರಕರಣ ದಾಖಲಿಸಿಕೊಂಡು ಆತನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.