
ಮಾನವೀಯ ಮೌಲ್ಯಗಳೇ ಅಲ್ ಬಿರ್ರ್ ಶಿಕ್ಷಣದ ಗುರಿ: ಅಡ್ಯಾರ್ ಕಣ್ಣೂರು ಅಲ್ ಬಿರ್ರ್ ಸ್ಕೂಲಿನ ಪೇರೆಂಟಿಂಗ್ ವರ್ಕ್ ಶಾಪ್‌ನಲ್ಲಿ ಮುಫತ್ತಿಶ್ ಉಮರ್ ದಾರಿಮಿ
ಮಂಗಳೂರು: ಪ್ರಿ ಪ್ರೈಮರಿ ಶಿಕ್ಷಣಕ್ಕಾಗಿ ಸಮಸ್ತ ಜಾರಿಗೆ ತಂದು ಕಳೆದ ಹತ್ತು ವರ್ಷಗಳಿಂದ ಯಶಸ್ವಿ ಯಾಗಿ ನಡೆದುಕೊಂಡು ಬರುತ್ತಿರುವ ಅಲ್‌ಬಿರ್ರ್ ಶಿಕ್ಷಣ ಸಂಸ್ಥೆಯಲ್ಲಿ ಎಳೆಯ ಪ್ರಾಯದಿಂದಲೇ ಮಾನವೀಯ ಮೌಲ್ಯಗಳ ಕಲಿಕೆಗೆ ವಿಶೇಷ ಒತ್ತು ನೀಡಲಾಗಿದೆ. ಸಂಸ್ಥೆಯು ಕೇವಲ ಶೈಕ್ಷಣಿಕ ಜ್ಞಾನಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿ ನೈತಿಕತೆ, ಸಾಮಾಜಿಕ ಜವಾಬ್ದಾರಿ ಮತ್ತು ಸಹಾನುಭೂತಿಯನ್ನು ಬೆಳೆಸಲು ಶ್ರಮಿಸುತ್ತಿದೆ ಎಂದು ಅಲ್‌ಬಿರ್ರ‌್ ಪೇರೆಂಟಿಂಗ್ ತರಬೇತುದಾರ, ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಹೇಳಿದ್ದಾರೆ.
ನಗರದ ಅಡ್ಯಾರ್ ಕಣ್ಣೂರು ಅಲ್ ಬಿರ್ರ್ ಸ್ಕೂಲಿನ ಪೋಷಕರಿಗಾಗಿ ಆಯೋಜಿಸಲಾಗಿದ್ದ ಪೇರೆಂಟಿಂಗ್ ವರ್ಕ್ ಶಾಪ್‌ನಲ್ಲಿ ವಿಷಯ ಮಂಡಿಸಿ ಅವರು ಮಾತನಾಡುತ್ತಿದ್ದರು.
ಪ್ರತೀ ತರಗತಿಗೆ ಎರಡು ನುರಿತ ಶಿಕ್ಷಕಿಯರನ್ನು ಇಟ್ಟುಕೊಂಡು ಅವರು ವಿದ್ಯಾರ್ಥಿಗಳಿಗೆ ಮಾದರಿಯಾಗಿ ಮೌಲ್ಯ ಆಧಾರಿತ ಚರ್ಚೆಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಿ ಶಿಶು ಸ್ನೇಹಿಯಾದ ದೃಶ್ಯಶ್ರಾವ್ಯ ಗಳನ್ನು ಒಳಗೊಂಡ ಡಿಜಿಟಲ್ ಪಠ್ಯಕ್ರಮ ಅಲ್‌ಬಿರ್ರ‌್ ಶಿಕ್ಷಣ ವ್ಯವಸ್ಥೆಯ ವಿಶೇಷತೆಯಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಹಾಯಕವಾಗುವಂತೆ ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಸ್ಥೆಯು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರ ನ್ನಾಗಿ ರೂಪಿಸಲು ಬದ್ಧವಾಗಿದೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿ ಕೇವಲ ಅಂಕಗಳಿಗೆ ಸೀಮಿತವಾಗದೆ ವಿದ್ಯಾರ್ಥಿಗಳ ನೈತಿಕ ವಿಕಸನವನ್ನು ಪರಿಗಣಿಸಲಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿ ಗೆಗೆ ಪೋಷಕರ ಸಹಕಾರವನ್ನು ಪಡೆಯಲಾಗುತ್ತಿದೆ ಎಂದು ಉಮರ್ ದಾರಿಮಿ ಸಾಲ್ಮರ ಹೇಳಿದರು.
ಅಲ್‌ಬಿರ್ರ್ ಸಂಸ್ಥೆಯ ಕೋಆರ್ಡಿನೇಟರ್ ಸಿತಾರ್ ಮಜೀದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಇರ್ಫಾನ್ ಅಸ್ಲಮಿ ದುಆಗೈದರು. ಟ್ರಷ್ಟಿ ಹೈದರ್ ಹಾಜಿ, ಅಲ್ ಬಿರ್ರ್ ಶಿಕ್ಷಕಿಯರಾದ ಆಫೀದಾ ಮತ್ತು ಝಕಿಯ್ಯಾ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಸಂಚಾಲಕ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಶಿಕ್ಷಕಿ ನಸೀಫಾ ಕಾರ್ಯಕ್ರಮ ನಿರೂಪಿಸಿದರು.