
ಕುಡಪುವಿನಲ್ಲಿ ನಡೆದ ಅಶ್ರಫ್ ಗುಂಪು ಹತ್ಯೆ ಪ್ರಕರಣ: ಬಿಡುಗಡೆಗೊಳಿಸಿದ ಸತ್ಯಶೋಧನಾ ವರದಿಯಲ್ಲಿ ಏನಿದೆ...?
ಬೆಂಗಳೂರು: ಮಂಗಳೂರಿನ ಕುಡಪುವಿನಲ್ಲಿ ಕೇರಳದ ಮುಹಮ್ಮದ್ ಅಶ್ರಫ್ (39) ಎಂಬವರನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ದಾರುಣ ಘಟನೆ ರಾಜ್ಯದಾದ್ಯಂತ ಆಕ್ರೋಶದ ಎಬ್ಬಿಸಿತ್ತು. ಈ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ಕರ್ನಾಟಕ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಫಾರ್ ಸಿವಿಲ್ ರೈಟ್ಸ್ - ಕರ್ನಾಟಕ ಆಲ್ ಇಂಡಿಯಾ ಅಸೋಸಿಯೇಷನ್ ಫಾರ್ ಜಸ್ಟಿಸ್ - ಕರ್ನಾಟಕ ಜಂಟಿಯಾಗಿ ನಡೆಸಿದ ಸತ್ಯಶೋಧನೆ ವರದಿಯನ್ನು ಶನಿವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಲಾಯಿತು.
ಎಪ್ರಿಲ್ 27ರಂದು ಸಂಜೆ ಈ ಘಟನೆ ನಡೆದಿತ್ತು. ಈ ಸಂದರ್ಭ ಸ್ಥಳೀಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಸ್ಥಳೀಯ ನಿವಾಸಿಗಳ ಪ್ರಕಾರ, ಹತ್ಯೆ ವೇಳೆ ಅಶ್ರಫ್ ಸಹಾಯಕ್ಕಾಗಿ ಕೂಗಿದರೂ ಯಾರೂ ಸಹಾಯಕ್ಕೆ ಬಂದಿರಲಿಲ್ಲ ಎಂದು ತಿಳಿದುಬಂದಿದೆ.
ಮಂಗಳೂರು ನಗರ ಪೊಲೀಸ್ ನ ಅಂದಿನ ಕಮಿಷನರ್ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿದ್ದರೂ ಎಫ್ ಐ ಆರ್ ದಾಖಲಿಸಲು ವಿಳಂಬ ಮಾಡಿರುವ ಬಗ್ಗೆ ವರದಿಯು ಗಂಭೀರ ಲೋಪಗಳನ್ನು ಎತ್ತಿದೆ. ಗುಂಪು ಹತ್ಯೆ ಪ್ರಕರಣದಲ್ಲಿ ತಹಸೀನ್ ಪೂನಾವಾಲಾ ಪ್ರಕರಣವನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ನಿರ್ದೇಶವನ್ನು ಪಾಲಿಸಬೇಕಾಗಿದ್ದ ನೋಡಲ್ ಅಧಿಕಾರಿ ಡಿಸಿಪಿ, ಅದನ್ನು ಉಲ್ಲಂಘಿಸಿದ್ದಾರೆ ಎಂದು ವರದಿ ಬೆಟ್ಟು ಮಾಡಿದೆ.
ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಪ್ರಾರಂಭದಲ್ಲಿ ‘ಅಸ್ವಾಭಾವಿಕ ಸಾವು’ ಎಂದು ದಾಖಲಿಸಿ, ಹತ್ಯೆ ಪ್ರಕರಣ ದಾಖಲಿಸುವಲ್ಲಿ ವಿಳಂಬ ಮಾಡಿದ್ದರು. ಇದರಿಂದ ಸಾಕ್ಷ್ಯ ನಾಶವಾಗಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಸ್ಥಳೀಯರ ಪ್ರಕಾರ, ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾದ ವದಂತಿಗಳು ಹರಡಲ್ಪಟ್ಟಿದ್ದು, ಮೃತ ವ್ಯಕ್ತಿ ಅಶ್ರಫ್ 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಕೂಗಿದ ಎಂಬ ಸುಳ್ಳು ಮಾಹಿತಿಯನ್ನು ಹರಡಲಾಗಿತ್ತು. ಈ ಕುರಿತು ಗೃಹ ಸಚಿವರು ನೀಡಿದ್ದ ಪ್ರತಿಕ್ರಿಯೆಯು ವಿವಾದಕ್ಕೆ ಕಾರಣವಾಗಿತ್ತು ಎಂದು ವರದಿ ಹೇಳಿದೆ.
ಸತ್ಯಶೋಧನಾ ವರದಿಯು ಹಲವು ವಿಚಾರಗಳ ಕಡೆಗೆ ಗಮನ ಹರಿಸಿದೆ. ತನಿಖೆಯಲ್ಲಿನ ಲೋಪಗಳ ಬಗ್ಗೆ ಗಂಭೀರವಾಗಿ ಉಲ್ಲೇಖಿಸಿದೆ. ಘಟನೆ ಸ್ಥಳದ ಸಿಸಿಟಿವಿ ದೃಶ್ಯಾವಳಿ ವಶಪಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ಸ್ಥಳದಲ್ಲಿದ್ದ ವ್ಯಕ್ತಿಗಳ ಬಗ್ಗೆ ಸರಿಯಾದ ತನಿಖೆ ನಡೆಸಿಲ್ಲ ಎಂದು ವರದಿಯು ಗಮನ ಸೆಳೆದಿದೆ. ಮರಣೋತ್ತರ ಪರೀಕ್ಷೆಯ ವರದಿ ಕುಟುಂಬಕ್ಕೆ ಒದಗಿಸಲಾಗಿಲ್ಲ. ಪ್ರಮುಖ ವ್ಯಕ್ತಿಗಳನ್ನು ತನಿಖೆಯಿಂದ ಬಿಟ್ಟಿರುವ ಕುರಿತು ವರದಿ ಬೆಟ್ಟು ಮಾಡಿದೆ. ಈ ಕುರಿತು ಮಾನವ ಹಕ್ಕು ಸಂಘಟನೆಗಳು ಹಾಗೂ ಸ್ಥಳೀಯ ಸಮಾಜದ ಪ್ರಮುಖರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯಾಯಯುತ ತನಿಖೆಗೆ ಒತ್ತಾಯಿಸಿದೆ.
ಅಶ್ರಫ್ ಅವರ ಹತ್ಯೆಯ ಎರಡು ತಿಂಗಳುಗಳ ನಂತರವೂ, ರಾಜ್ಯ ಸರ್ಕಾರವು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಿಲ್ಲ ಮತ್ತು ತಹಸೀನ್ ಪೂನಾವಾಲಾ ಪ್ರಕರಣ ಮತ್ತು ಸರ್ಕಾರಿ ಆದೇಶದ ಪ್ರಕಾರ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರವನ್ನು ಇನ್ನೂ ವಿತರಿಸಿಲ್ಲ ಎಂದು ವರದಿಯು ಹೇಳಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಡೆಯುತ್ತಿರುವ ಹಲ್ಲೆ ಮತ್ತು ಹತ್ಯೆ ಪ್ರಕರಣಗಳಲ್ಲಿ ಇದು ಇತ್ತೀಚಿನ ಉದಾಹರಣೆ. ಈ ಹಿಂದೆ ಘಟನೆಗಳಲ್ಲಿಯೂ ಕೂಡ ಪೊಲೀಸರು ಸೂಕ್ತ ತನಿಖೆ ನಡೆಸಿಲ್ಲ. ಈ ಪ್ರಕರಣ ರಾಜ್ಯ ಸರ್ಕಾರದಿಂದ ತ್ವರಿತ, ನ್ಯಾಯಯುತ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮದ ನಿರೀಕ್ಷೆಯಿದೆ ಎಂದು ವರದಿಯು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕ ಮಾವಳ್ಳಿ ಶಂಕರ್, ವಿಶ್ವಸಂಸ್ಥೆಯ ತಜ್ಞೆ ಅಶ್ವಿನಿ ಕೆ ಪಿ, ವಕೀಲರಾದ ವಿನಯ್ ಶ್ರೀನಿವಾಸ್, ಮೈತ್ರೇಯಿ, ಮಾನವಿ, ಎಸ್ ಐ ಒ ರಾಜ್ಯ ಕಾರ್ಯದರ್ಶಿ ಹಯಾನ್, ಪಿಯುಸಿಎಲ್ ನ ಶಶಾಂಕ್ ಹಾಗೂ ಕೊಲೆಯಾದ ಅಶ್ರಫ್ ಸಹೋದರ ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.