
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಸ್ ಡಿಪಿಐ ಬೆಂಬಲವೇ ಕಾರಣ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಹುಕ್ಕೇರಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮಿತ್ರ ಸಂಘಟನೆಯಾದ ಎಸ್ ಡಿಪಿಐ ಬೆಂಬಲದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಶುಕ್ರವಾರ ಪ್ರತಿಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ“ದೇಶ ವಿರೋಧಿ ಶಕ್ತಿಗಳು” ಭಾಗಿಯಾಗಿವೆ ಎಂದು ಆರೋಪಿಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿದರು.
"ಮೋದಿ ಜಿ ದೇಶದಿಂದ ಭಯೋತ್ಪಾದನೆಯನ್ನು ಕೊನೆಗೊಳಿಸಿದರು. ಪಿಎಫ್‌ಐ ಅನ್ನು ನಿಷೇಧಿಸಿದರು. ಕರ್ನಾಟಕದಲ್ಲಿ ಎಸ್ ಡಿಪಿಐ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪರಿಣಾಮ ನೋಡಿ, ಅವರು ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ" ಎಂದು ಮಾರ್ಚ್ 1 ರಂದು ನಡೆದಿದ್ದ ರಾಮೇಶ್ವರಂ ಕೆಫೆ ಸ್ಫೋಟವನ್ನು ಉಲ್ಲೇಖಿಸಿದರು.
ಕಾಂಗ್ರೆಸ್ ಸರ್ಕಾರ ಮೊದಲು ಇದು ಸಿಲಿಂಡರ್ ಸ್ಫೋಟ ಎಂದು ಹೇಳಿದರು. ಇದು ಸಿಲಿಂಡರ್ ಸ್ಫೋಟವಲ್ಲ, ಇದು ರಾಷ್ಟ್ರವಿರೋಧಿಗಳು ನಡೆಸಿದ ಬಾಂಬ್ ಸ್ಫೋಟವಾಗಿದೆ. ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಿದಾಗ, ರಾಷ್ಟ್ರ ವಿರೋಧಿಗಳ ಕುಕೃತ್ಯ ಎಂಬುದು ತಿಳಿದುಬಂದಿದೆ. ಚಿಂತೆ ಮಾಡಬೇಡಿ, ಕಾಂಗ್ರೆಸ್ ಸರ್ಕಾರ ಏನೇ ಮಾಡಲಿ. ನರೇಂದ್ರ ಮೋದಿ ಸರ್ಕಾರವು ಕರ್ನಾಟಕವನ್ನು ಸುಭದ್ರವಾಗಿರಿಸುತ್ತದೆ ಎಂದು ಅವರು ಹೇಳಿದರು.
ನೇಹಾ ಹಿರೇಮಠ್ ಅವರ ಕೊಲೆಯನ್ನು ಉಲ್ಲೇಖಿಸಿದ ಶಾ, ಸರ್ಕಾರದ ಕೆಲವರು ವೈಯಕ್ತಿಕ ಸಮಸ್ಯೆಗಳಿಂದ ಹತ್ಯೆಯಾಗಿದೆ ಎಂದು ಹೇಳಿದರು. “ಏನಿದು ವೈಯುಕ್ತಿಕ ಸಮಸ್ಯೆ, ಮತಾಂತರಕ್ಕೆ ಇಷ್ಟವಿಲ್ಲದ ಹುಡುಗಿಯನ್ನು ಕೊಲೆ ಮಾಡಲಾಗಿದೆ.
ಮೊನ್ನೆ ಹುಬ್ಬಳ್ಳಿಯಲ್ಲಿ ಅವರ ಫೋಷಕರನ್ನು ಭೇಟಿಯಾದೆ. ತನ್ನ ಮಗಳನ್ನು ಮತಾಂತರಕ್ಕೆ ಒಳಗಾಗುವಂತೆ ಒತ್ತಡ ಹೇರಿದ್ದಾಳೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಲು ಬಯಸುತ್ತೇನೆ, ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಸಿಬಿಐಗೆ ನೀಡಿ. ನೇಹಾ ಹಿರೇಮಠ್‌ಗೆ ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗುವುದನ್ನು ಬಿಜೆಪಿ ಖಾತ್ರಿಪಡಿಸುತ್ತದೆ ಎಂದು ಅವರು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದರೂ ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ. ತಮ್ಮ ಮತ ಬ್ಯಾಂಕ್‌ಗೆ ಹೆದರಿ" ಕಾರ್ಯಕ್ರಮ ಬಿಟ್ಟರು ಎಂದು ಆರೋಪಿಸಿದರು.