
ಉಡುಪಿ: ಮಗಳ ಜೊತೆ ಜಗಳವಾಡಿ ಸಿಟ್ಟಿನಿಂದ ವಿಷ ಸೇವಿಸಿದ ಮಹಿಳೆಯ ರಕ್ಷಣೆ
ಉಡುಪಿ: ಮಗಳ ಜೊತೆ ಜಗಳವಾಡಿ ವಿಷ ಸೇವಿಸಿ ಅಸ್ವಸ್ಥಳಾದ ಹೊರ ಜಿಲ್ಲೆಯ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಮಹಿಳೆಯ ಮಗಳು ಮಂಗಳೂರಿನ ಕಾಲೇಜು ಒಂದರಲ್ಲಿ ಕಲಿಯುತ್ತಿದ್ದು, ತಾಯಿ ಮಗಳಿಗೆ ಜಗಳವಾಗಿ ಮನಸ್ತಾಪ ಆಗಿದ್ದು, ತಾಯಿ ತನ್ನ ಊರಿನಿಂದ ಕ್ರಿಮಿನಾಶಕ ವಿಷ ಖರೀದಿಸಿ ತಂದಿದ್ದು ತನ್ನ ಮಗಳ ಎದುರಿಗೇ ವಿಷ ಸೇವಿಸುವಾಗ ಮಗಳು ದೂಡಿದ್ದು ವಿಷವೆಲ್ಲ ಮೈಮೇಲೆ ಬಿದ್ದಿದ್ದು ಎರಡು ಹನಿ ನಾಲಿಗೆಗೆ ತಾಗಿದೆ ಎಂದಿದ್ದಾರೆ. ಮಂಗಳೂರಿನಿಂದ ಉಡುಪಿಗೆ ಬರುವ ತನಕ ಯಾವುದೇ ಸಮಸ್ಯೆ ಇಲ್ಲದೆ ಇದ್ದು ಉಡುಪಿಯಲ್ಲಿ ಮಹಿಳೆಗೆ ಎದೆ ಉರಿ ಶುರುವಾಗಿದ್ದು ಒದ್ದಾಟ ಆರಂಭಿಸಿದ್ದಾರೆ. ಮಾಹಿತಿ ಪಡೆದ ವಿಶು ಶೆಟ್ಟಿ ಅಂಬಲಪಾಡಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆಯು ವಿಶು ಶೆಟ್ಟಿಯವರಲ್ಲಿ ನನಗೆ ಸಾವು ಸಂಭವಿಸಿದರೂ ಮಗಳಿಗೆ ತಿಳಿಸಬಾರದು. ನಮ್ಮಿಬ್ಬರ ಸಂಬಂಧ ಕಡಿದು ಹೋಯಿತು ಎಂದು ಕಠಿಣವಾಗಿ ನುಡಿದಿದ್ದಾರೆ.
ಮಹಿಳೆಯು ಮಾನಸಿಕವಾಗಿ ಬಹಳಷ್ಟು ನೊಂದಿದ್ದು ಮಹಿಳೆಗೆ ತುರ್ತು ಸ್ಪಂದಿಸಬೇಕಾಗಿ ಮಹಿಳಾ ಪರ ಇಲಾಖೆಯಲ್ಲಿ ವಿಶು ಶೆಟ್ಟಿಯವರು ಆಗ್ರಹಿಸಿದ್ದಾರೆ.