
ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ: ರೆಕಾರ್ಡ್ ಆದ ಪೈಲಟ್‌ಗಳ ಸಂಭಾಷಣೆಯಲ್ಲಿ ಏನಿದೆ...?
ನವದೆಹಲಿ: ಅಹಮದಾಬಾದ್‌ನಲ್ಲಿ 270 ಜನರನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತ ಕುರಿತು ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (ಎಎಐಬಿ) 15 ಪುಟಗಳ ಪ್ರಾಥಮಿಕ ವರದಿಯನ್ನು ಪ್ರಕಟಿಸಿದೆ.
‘ನೀವು ಯಾಕೆ ಇಂಧನ ಸ್ಥಗಿತಗೊಳಿಸಿದ್ದೀರಿ?’ ಎಂದು ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್‌ನಲ್ಲಿ ಒಬ್ಬ ಪೈಲಟ್ ಇನ್ನೊಬ್ಬರನ್ನು ಕೇಳುತ್ತಿರುವುದು ರೆಕಾರ್ಡ್ ಆಗಿದೆ. ಇನ್ನೊಬ್ಬ ಪೈಲಟ್ ತಾನು ಹಾಗೆ ಮಾಡಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ಪೈಲಟ್‌ಗಳ ಸಂಭಾಷಣೆ ಅದರಲ್ಲಿದೆ.
ಜೂ.12 ರಂದು ಬೋಯಿಂಗ್ ಡ್ರೀಮ್‌ಲೈನರ್ 787-8 ಅಪಘಾತಕ್ಕೀಡಾಗಲು ಕಾರಣ ಏನೆಂಬುದು ಯಕ್ಷ ಪ್ರಶ್ನೆಯಾಗಿತ್ತು. ವಿಮಾನದ ಎರಡು ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ವಿಮಾನವು ಹಾರಾಟದ ಸಮಯದಲ್ಲಿ ಗರಿಷ್ಠ ವೇಗ ಪಡೆದುಕೊಂಡ ಹೊತ್ತಿಗೆ ಎಂಜಿನ್-1 ಮತ್ತು ಎಂಜಿನ್-2ಕ್ಕೆ ಇಂಧನ ಪೂರೈಕೆ ಸ್ಥಗಿತಗೊಂಡಿದೆ. ಇದು ‘ರನ್’ ಸ್ಥಿತಿಯಿಂದ ‘ಕಟ್‌ಆಫ್’ ಸ್ಥಿತಿಗೆ ತಲುಪಿದೆ. ಈ ಎರಡೂ ಎಂಜಿನ್‌ಗಳು ಒಂದು ಸೆಕೆಂಡು ಅಂತರದಲ್ಲಿ ತಮ್ಮ ಕಾರ್ಯ ಸ್ಥಗಿತಗೊಳಿಸಿವೆ. ಕಾಕ್‌ಪಿಟ್‌ನ ಸಂಭಾಷಣೆಯು ಬ್ಲ್ಯಾಕ್‌ಬಾಕ್ಸ್‌ನಲ್ಲಿ ದಾಖಲಾಗಿದೆ.