
ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ಕಾನೂನಿನಲ್ಲಿ ಸೂಕ್ತ ತಿದ್ದುಪಡಿಗೆ ಶಿಫಾರಸ್ಸು; ಕರಾವಳಿ ಜಿಲ್ಲೆಗಳ ಸೌಹಾರ್ದ ವಾತಾವರಣ ಸೃಷ್ಟಿಗೆ ಕೆಪಿಸಿಸಿ ರಚಿಸಿರುವ ನಿಯೋಗ ಉಡುಪಿಗೆ ಭೇಟಿ
ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಹದಗೆಟ್ಟಿರುವ ಕೋಮು ಸೌಹಾರ್ದತೆಯನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೇಮಿಸಿರುವ ಪಕ್ಷದ ಹಿರಿಯ ನಾಯಕರನ್ನೊಳಗೊಂಡ ಸೌಹಾರ್ದ ಸಮಿತಿ ಇಂದು ಉಡುಪಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಮೀನುಗಾರರು ಸೇರಿದಂತೆ ವಿವಿಧ ಸಂಘಟನೆಗಳ ನಾಯಕರೊಂದಿಗೆ ಹೊಟೇಲ್ ಕಾರ್ತಿಕ್‌ನಲ್ಲಿ ಸುದೀರ್ಘ ಚರ್ಚೆ, ಸಂವಾದ ನಡೆಸಿತು.
ಬೆಳಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ, ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಹೊಟೇಲ್ ಕಾರ್ತಿಕ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ನಿಯೋಗದ ಸದಸ್ಯರು ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ದ್ವೇಷಭರಿತ ಹಾಗೂ ಪ್ರಚೋದನಕಾರಿ ಭಾಷಣಗಳಿಗೆ ಕಡಿವಾಣ ಹಾಕಿದರೆ ಕೋಮು ಸೌರ್ಹಾದತೆ ಕೆಡಿಸುವ ಅವಕಾಶಗಳು ಕಡಿಮೆಯಾಗಲಿದೆ. ಇದರಿಂದ ಕರಾವಳಿಯ ಅಭಿವೃದ್ಧಿಗೂ ಸಹಾಯವಾಗಲಿದೆ. ಹೀಗಾಗಿ ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ಮಾಡುವಂತೆ ನಾವು ನೀಡುವ ವರದಿಯಲ್ಲಿ ಶಿಫಾರಸ್ಸು ಮಾಡುತ್ತೇವೆ ಎಂದು ನಿಯೋಗದ ನೇತೃತ್ವ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಮತ್ತು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.
ಎರಡು ದಿನಗಳ ತಮ್ಮ ಪ್ರವಾಸ ಮುಗಿದ ಬಳಿಕ ವರದಿಯನ್ನು ಶೀಘ್ರವೇ ಪಕ್ಷಕ್ಕೆ ನೀಡುತ್ತೇವೆ. ಇವು ಗಳಲ್ಲಿ ಉಡುಪಿ ಸೇರಿದಂತೆ ಕರಾವಳಿಯಲ್ಲಿ ಶಾಂತಿ ಸೌಹಾರ್ದತೆಯನ್ನು ಸ್ಥಾಪಿಸಲು, ಇಲ್ಲಿ ಚರ್ಚೆಯ ವೇಳೆ ಮೂಡಿ ಬಂದ ಅಭಿಪ್ರಾಯದ ಹಿನ್ನೆಲೆಯಲ್ಲಿ ನಮ್ಮ ಶಿಫಾರಸ್ಸುಗಳು ನೀಡಲಿದ್ದೇವೆ ಎಂದು ನಾಸೀರ್ ಹುಸೇನ್ ತಿಳಿಸಿದರು.
ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ಯಾಗಿ ಮಾಡಲು ಜಿಲ್ಲೆಯ ನಾಗರಿಕ ಸಮಾಜ ಅವಕಾಶ ನೀಡಬಾರದು. ವಿದ್ಯಾವಂತರ, ಬುದ್ಧಿವಂತರ ಜಿಲ್ಲೆ ಇದು. ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿವಿಧ ಅಂಶಗಳಿಂದ ಜಿಲ್ಲೆಯ ಅಭಿವೃದ್ಧಿ ಹಿನ್ನಡೆ ಉಂಟಾಗುತ್ತದೆ. ಇದರಿಂದ ಜಿಲ್ಲೆ ಬಲಿಷ್ಠವಾಗಿರುವ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೂ ದೊಡ್ಡ ಹೊಡೆತ ಬೀಳಲಿದೆ. ಈ ನಿಟ್ಟಿನಲ್ಲಿ ನಾಗರಿಕ ಸಮಾಜದ ಜವಾಬ್ದಾರಿ ದೊಡ್ಡದಿದೆ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು, ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣ ಕ್ಷೇತ್ರ ಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ನಮ್ಮ ವರದಿಯಲ್ಲಿ ನೀಡಲಿದ್ದೇವೆ. ಇದಕ್ಕಾಗಿ ನಾವು ಸಮಾಜದ ವಿವಿಧ ವರ್ಗಗಳೊಂದಿಗೆ ವಿವರವಾಗಿ ಚರ್ಚಿಸಿದ್ದೇವೆ. ಇದರ ನಂತರವೂ ಚರ್ಚಿಸಲಿದ್ದೇವೆ ಎಂದು ತಿಳಿಸಿದರು.
ವಿ.ಆರ್.ಸುದರ್ಶನ್ ಅವರು ಮಾತನಾಡಿ ಕರಾವಳಿ ಜಿಲ್ಲೆಗಳು ರಾಜ್ಯದ ಪ್ರಗತಿಗೆ ಬಹುದೊಡ್ಡ ಕೊಡುಗೆ ನೀಡಿವೆ. ಆದರೆ ಇತ್ತೀಚಿನ ಘಟನೆಗಳಿಂದ ಕರಾವಳಿಗೆ ಕೆಟ್ಟ ಹೆಸರು ಬಂದಿದೆ. ಯಾರೋ ಶೇ.2ರಷ್ಟು ಮಂದಿ ಕಿಡಿಗೇಡಿಗಳು ಕೃತ್ಯ ಎಸಗುತ್ತಾರೆ. ಉಳಿದ ಶೇ.8ರಷ್ಟು ಮಂದಿ ಇದನ್ನು ಬಳಸಿಕೊಂಡು ಕೋಮು ಸೌಹಾರ್ದತೆ ಕೆಡಿಸಲು, ರಾಜಕೀಯವಾಗಿ ಇದನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಉಳಿದ ಶೇ.90 ರಷ್ಟು ಮಂದಿ ಇದರ ದುಷ್ಪರಿಣಾಮಗಳನ್ನು ಅನುಭವಿಸುತ್ತಾರೆ. ಆದರೆ ಇದರಲ್ಲಿ ಅವರ ಪಾತ್ರವೇನೂ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.
ನಿಯೋಗದ ಸದಸ್ಯ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಎರಡು ದಶಕಗಳ ಹಿಂದೆ ಕರಾವಳಿ ಹೀಗಿರಲಿಲ್ಲ. ಪಕ್ಷಗಳ ನಡುವೆ ವಿರೋಧವಿತ್ತು. ಆದರೆ ವೈರತ್ವವಿರಲಿಲ್ಲ. ಯಾರೂ ಧರ್ಮದ ದುರ್ಬಳಕೆ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ವಿರುದ್ಧವಾಗಿದೆ. ಜನಪ್ರತಿ ನಿಧಿಗಳೇ ಅಭಿವೃದ್ಧಿ ಕುರಿತ ಚರ್ಚೆ ಮಾಡದೇ, ಇಂಥ ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಾರೆ. ಕೋಮು ಸೌಹಾರ್ದೆ ಕೆಡುವುದರಿಂದ ಇಲ್ಲಿಗೆ ಬಂಡವಾಳ ಹೂಡಿಕೆ ಆಗುವುದಿಲ್ಲ. ಜನಪ್ರತಿನಿಧಿಗಳು ಸಮಾಜದ ಎಲ್ಲಾ ಜನರನ್ನು ಒಟ್ಟಿಗೆ ಕರೆದೊಯ್ದರೆ ಬದಲಾವಣೆ ಸಾಧ್ಯ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿನಯಕುಮಾರ್ ಸೊರಕೆ ಅವರೂ ಮಾತನಾಡಿದರು. ಗೋಷ್ಠಿ ಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡ ವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲ್, ಎಂ.ಎ.ಗಫೂರ್, ಉದಯಕುಮಾರ್ ಮುನಿಯಾಲು, ರಾಜು ಪೂಜಾರಿ, ಪ್ರಸಾದ್‌ರಾಜ್ ಕಾಂಚನ್, ಯತೀಶ್ ಕರ್ಕೆರ, ಕೀರ್ತಿ ಶೆಟ್ಟಿ, ಕೃಷ್ಣ ಶೆಟ್ಟಿ ಬಜಗೋಳಿ ಮೊದಲಾದವರು ಉಪಸ್ಥಿತರಿದ್ದರು.