ಕಾಂಗ್ರೆಸ್ ಸರಕಾರದ  ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲು ಬಿಜೆಪಿಯಿಂದ ನಿರಂತರ ಪ್ರಯತ್ನ: ಸೊರಕೆ ಆಕ್ರೋಶ

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲು ಬಿಜೆಪಿಯಿಂದ ನಿರಂತರ ಪ್ರಯತ್ನ: ಸೊರಕೆ ಆಕ್ರೋಶ


ಉಡುಪಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಕಾಂಗ್ರೆಸ್ಸಿನಿಂದ ಪ್ರತಿಭಟನೆ

ಉಡುಪಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ  ನಡೆಸುತ್ತಿರುವ ಅಪಪ್ರಚಾರದ ವಿರುದ್ಧ ಉಡುಪಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಸಮಿತಿ ಜಂಟಿಯಾಗಿ ಉಡುಪಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿತು.






9/11 ಸಮಸ್ಯೆ, ಅಕ್ರಮ ಸಕ್ರಮ 53 ಮತ್ತು 57 ಅರ್ಜಿ ತಿರಸ್ಕಾರ, ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ರದ್ದತಿ ಮತ್ತು ವಿದ್ಯುತ್ ದರ ಏರಿಕೆ ಕುರಿತು ಬಿಜೆಪಿ ಮಾಡುತ್ತಿರುವ ಅಪಪ್ರಚಾರಕ್ಕೆ ಕಾಂಗ್ರೆಸ್ ಪಕ್ಷದಿಂದ ಜನತೆಗೆ ವಾಸ್ತವ ವಿಚಾರ ತಿಳಿಸುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷದಿಂದ ಸತ್ಯ ದರ್ಶನ ಪ್ರತಿಭಟನಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಧಾರಾಕಾರ ಸುರಿಯುತ್ತಿರುವ ಮಳೆಯ ನಡುವೆಯೂ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು, ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲು ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಿದೆ. ಗೃಹಲಕ್ಷ್ಮೀ ಯೋಜನೆ ಪಡೆಯುತ್ತಿರುವ ಮಹಿಳೆಯರನ್ನೇ ಕರೆತಂದು ಪ್ರತಿಭಟನೆ ನಡೆಸುತ್ತಿದೆ. 9/11 ಅನ್ನು ಹುಟ್ಟುಹಾಕಿದ್ದೆ ಯಡಿಯೂರಪ್ಪ ಸರಕಾರ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಕರಾವಳಿ ಜಿಲ್ಲೆಯಲ್ಲಿ 25ಸೆಂಟ್ಸ್ ವರೆಗಿನ ತುಂಡು ಭೂಮಿಗೆ ವಿನಾಯಿತಿ ನೀಡಿದ್ದೆ. ಆದರೆ ಆ ಬಳಿಕ ಬಂದ ಬಿಜೆಪಿ ಸರಕಾರ ಅದನ್ನು ತೆಗೆದುಹಾಕಿತು. ಬಿಜೆಪಿ 2020ರಲ್ಲೇ ಪಿಂಚಣಿ ಪರಿಷ್ಕರಣೆಗೆ ಆದೇಶ‌ ಹೊರಡಿಸಿತ್ತು. ಆದರೆ ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಅರ್ಹರಲ್ಲದವರನ್ನು ಕೈಬಿಡುವ ಉದ್ದೇಶದಿಂದ ಬಿಜೆಪಿ ಸರಕಾರವೇ ಅಕ್ರಮ ಸಕ್ರಮಕ್ಕೆ ಆ್ಯಪ್ ಮಾಡಲು ತೀರ್ಮಾನಿಸಿತು. ಬಿಜೆಪಿ ಪ್ರಚಾರಕ್ಕಾಗಿ ಮಾತ್ರ ಯೋಜನೆ ಘೋಷಣೆ ಮಾಡುತ್ತಿದೆ ವಿನಾಯಾವುದನ್ನು ಅನುಷ್ಠಾನ ಮಾಡುತ್ತಿಲ್ಲ ಎಂದರು.

ಈ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಅಮೃತ್ ಶೆಣೈ, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ಎಂ.ಎ.ಗಫೂರ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಶೇಖ್ ವಾಹಿದ್ ದಾವೂದ್ ಮೊದಲಾದವರು ಇದ್ದರು.

Ads on article

Advertise in articles 1

advertising articles 2

Advertise under the article