
ಜುಲೈ14ರಂದು ಉಡುಪಿಯಲ್ಲಿ SYS ಸೌಹಾರ್ದ ಸಂಚಾರ ಕಾರ್ಯಕ್ರಮ; ಉಡುಪಿ ಜಾಮೀಯಾ ಮಸೀದಿಯಿಂದ ಸೌಹಾರ್ದ ಕಾಲ್ನಡಿಗೆ ಜಾಥಾ, ಮದರ್ ಆಫ್ ಸೊರೋಸ್ ಚರ್ಚಿನಲ್ಲಿ ಸೌಹಾರ್ದ ಸಂದೇಶ
ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈಎಸ್ ) ವತಿಯಿಂದ ಜುಲೈ 14ರಿಂದ 16 ರ ವರೆಗೆ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಸೌಹಾರ್ದ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜುಲೈ 14ರಂದು ಉಡುಪಿಗೆ ಸೌಹಾರ್ದ ಸಂದೇಶ ಜಾಥಾ ಆಗಮಿಸಲಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹಂಝತ್ ಹೆಜಮಾಡಿ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬುದ್ಧಿವಂತರ ಜಿಲ್ಲೆ ಎಂದು ಹೆಸರುವಾಸಿಯಾದ ಕರಾವಳಿ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳು ತೀರಾ ಆತಂಕಕಾರಿಯಾಗಿದೆ. ಮನುಷ್ಯ ಮನಸ್ಸುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ಒಬ್ಬರನ್ನೊಬ್ಬರು ಅರಿತು, ಬೆರೆತು ಬದುಕಿದರೆ ಮಾತ್ರ ಸ್ವಸ್ಥ ಜೀವನ ಸಾಧ್ಯ ಈ ಸಂದೇಶವನ್ನು ಸಮಾಜದ ಮುಂದೆ ಪ್ರಬಲವಾಗಿ ಪ್ರತಿಪಾದಿಸುವ ಸಲುವಾಗಿ ‘ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಈ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗುವ ‘ಕರಾವಳಿಯ ನೆಲದಲ್ಲಿ ಸೌಹಾರ್ದ ಸಂಚಾರ’ ಎಂಬ ಕಾರ್ಯಕ್ರಮವು ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ. ಜುಲೈ 14ರಂದು ಬೆಳಿಗೆ 8 ಗಂಟೆಗೆ ಕುಂದಾಪುರ ಅಸ್ವಯ್ಯದ್ ಯೂಸುಫ್ ವಲಿಯುಲ್ಲಾಹಿ ರವರ ದರ್ಗಾ ಝಿಯಾರತ್ ನೊಂದಿಗೆ ಆರಂಭವಾಗುವ ಸೌಹಾರ್ದ ಸಂಚಾರವು ಬೆಳಿಗ್ಗೆ 9 ಗಂಟೆಗೆ ಕುಂದಾಪುರ ದರ್ಗಾದಿಂದ ಶಾಸ್ತ್ರಿ ಸರ್ಕಲ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾ ಹಾಗೂ ನಂತರ ಸೌಹಾರ್ದ ಸಂದೇಶ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಉಡುಪಿ ಜಾಮಿಯಾ ಮಸೀದಿಯಿಂದ ಮದರ್ ಆಫ್ ಸೋರೋಸ್ ಚರ್ಚ್ ತನಕ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಮಧ್ಯಾಹ್ನ 3.30 ಗಂಟೆಗೆ ಕಾರ್ಕಳ ಗ್ಯಾಲಕ್ಸಿ ಹಾಲ್ ನಿಂದ ಬಸ್ಸು ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಸಂಜೆ 5:30 ಗಂಟೆಗೆ ಕಾಪು ಪೊಲಿವು ಜಾಮಿಯಾ ಮಸೀದಿಯಿಂದ ಕಾಪು ಪೇಟೆ ತನಕ ಸೌಹಾರ್ದ ನಡಿಗೆ ಹಾಗೂ ಸಂದೇಶ ಭಾಷಣ ನಡೆಯಲಿದೆ. ರಾತ್ರಿ 8 ಗಂಟೆಗೆ ಪಡುಬಿದ್ರಿ ಸೌಹಾರ್ದ ಭಾಷಣ ನಡೆಯಲಿದೆ ಎಂದು ತಿಳಿಸಿದರು.
ಈ ಸೌಹಾರ್ದ ಸಂಚಾರದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಕ್ರೈಸ್ತ ಧರ್ಮಗುರುಗಳು ಮುಸ್ಲಿಂ ಧಾರ್ಮಿಕ ವಿದ್ವಾಂಸರು, ಸಾಮಾಜಿಕ ಶೈಕ್ಷಣಿಕ ಹಾಗೂ ಇನ್ನಿತರ ಪ್ರಮುಖ ನಾಯಕರುಗಳು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಹಬೀಬ್ ಆಲಿ, ಪ್ರಧಾನ ಕಾರ್ಯದರ್ಶಿ ಎಮ್ ಸಲೀಂ ಪಕೀರ್ಣಕಟ್ಟೆ, ಎಸ್ ವೈ ಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಹುಸೈನ್ ಸಅದಿ ಹೊಸ್ಮಾರು, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಹೆಮ್ಮಾಡಿ, ಸ್ವಾಗತ ಸಮಿತಿ ಸಂಚಾಲಕರಾದ ಇಂತಿಯಾಝ್ ಹೊನ್ನಾಳ, ಕಾರ್ಯದರ್ಶಿ ತೌಫೀಕ್ ಅಂಬಾಗಿಲು ಉಪಸ್ಥಿತರಿದ್ದರು.