
ಐದು ಹುಲಿಗಳ 'ಅಸ್ವಾಭಾವಿಕ ಸಾವು' ಪ್ರಕರಣ; ಡಿಸಿಎಫ್ ಸೇರಿ ನಾಲ್ವರು ಅಧಿಕಾರಿಗಳ ಅಮಾನತು: ಸಚಿವ ಈಶ್ವರ್ ಖಂಡ್ರೆ ಶಿಫಾರಸು

ಬೆಂಗಳೂರು: ಮಲೆ ಮಹದೇಶ್ವರ(ಎಂಎಂ) ಬೆಟ್ಟದಲ್ಲಿ ಐದು ಹುಲಿಗಳ 'ಅಸ್ವಾಭಾವಿಕ ಸಾವು' ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ಆರೋಪದ ಮೇಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ವೈ ಚಕ್ರಪಾಣಿ ಮತ್ತು ಇತರ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಶುಕ್ರವಾರ ಶಿಫಾರಸು ಮಾಡಿದ್ದಾರೆ.
ಜೂನ್ 26 ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷಪ್ರಾಶನದಿಂದ ಒಂಬತ್ತು ವರ್ಷದ ಹುಲಿ ಮತ್ತು ಅದರ ನಾಲ್ಕು ಮರಿಗಳು ಸಾವನ್ನಪ್ಪಿದ ಪ್ರಕರಣದ ಬಗ್ಗೆ ಇಲಾಖಾ ತನಿಖೆಗೆ ಈಶ್ವರ್ ಖಂಡ್ರೆ ಆದೇಶಿಸಿದ್ದರು.
ಘಟನೆಯ ತನಿಖೆಗಾಗಿ ರಚಿಸಲಾದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಎಪಿಸಿಸಿಎಫ್) ಕುಮಾರ್ ಪುಷ್ಕರ್ ನೇತೃತ್ವದ ಉನ್ನತ ಮಟ್ಟದ ತನಿಖಾ ಸಮಿತಿ ಸಲ್ಲಿಸಿದ ಪ್ರಾಥಮಿಕ ವರದಿಯನ್ನು ಆಧರಿಸಿ ಈಶ್ವರ್ ಖಂಡ್ರೆ ಅವರು ವೈ ಚಕ್ರಪಾಣಿ ಮತ್ತು ಇತರ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚಿಸಿದ್ದಾರೆ.
ಜುಲೈ 10 ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಸಮಿತಿಗೆ ಸಚಿವರು ನಿರ್ದೇಶಿಸಿದ್ದಾರೆ.
"ಹುಲಿಗಳ ಅಸಹಜ ಸಾವಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪದ ಸ್ಪಷ್ಟ ಪುರಾವೆಗಳ ಆಧಾರದ ಮೇಲೆ, ಡಿಸಿಎಫ್ ವೈ ಚಕ್ರಪಾಣಿ ಮತ್ತು ಇತರ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಚಿವರು ಶಿಫಾರಸು ಮಾಡಿದ್ದಾರೆ" ಎಂದು ಖಂಡ್ರೆ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಮೂರು ತಿಂಗಳಿನಿಂದ, ಮುಂಚೂಣಿಯ ಗುತ್ತಿಗೆ ಸಿಬ್ಬಂದಿಗೆ ಅವರ ವೇತನ ಅಥವಾ ಭತ್ಯೆಯನ್ನು ಪಾವತಿಸಲಾಗಿಲ್ಲ. ಇದು ಗಸ್ತು ಚಟುವಟಿಕೆಗಳಿಗೆ ಅಡ್ಡಿಯಾಗಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
ಖಂಡ್ರೆ ಕಚೇರಿಯ ಪ್ರಕಾರ, ಏಪ್ರಿಲ್ ಅಂತ್ಯದ ವೇಳೆಗೆ ವೇತನ ಪಾವತಿಸಲು ಹಣ ಬಿಡುಗಡೆ ಮಾಡಲಾಗಿದ್ದರೂ, ಜೂನ್ ವರೆಗೆ ವೇತನ ಪಾವತಿ ಮಾಡಿಲ್ಲ. ಹೀಗಾಗಿ ಜೂನ್ 23 ರಂದು ಗುತ್ತಿಗೆ ಸಿಬ್ಬಂದಿ ಮಾರ್ಚ್‌ನಿಂದ ವೇತನ ಬಂದಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು.