ಜುಲೈ 20ರಂದು ಕುಂದಾಪುರದಲ್ಲಿ "ಲಗೋರಿ" ಗ್ರಾಮೀಣ ಕ್ರೀಡಾಕೂಟ; ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ಆಯೋಜನೆ

ಜುಲೈ 20ರಂದು ಕುಂದಾಪುರದಲ್ಲಿ "ಲಗೋರಿ" ಗ್ರಾಮೀಣ ಕ್ರೀಡಾಕೂಟ; ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ಆಯೋಜನೆ

ಉಡುಪಿ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇದರ ಆಶ್ರಯದಲ್ಲಿ "ಲಗೋರಿ" ಗ್ರಾಮೀಣ ಕ್ರೀಡಾಕೂಟವನ್ನು ಇದೇ ಜುಲೈ 20ರಂದು ಕುಂದಾಪುರ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಮ್ಮ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಭಾಷೆಯ ಹೆಸರಿನಲ್ಲಿ ಲಗೋರಿ ಎಂಬ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಇಂದಿನ ಜನಾಂಗ ನೋಡದ ಮತ್ತು‌ ಆಡದ ಆಟಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9ಗಂಟೆಯಿಂದ ಸಂಜೆ 7ಗಂಟೆಯವರೆಗೆ ಕ್ರೀಡಾಕೂಟ ನಡೆಯಲಿದೆ ಎಂದರು. 

ಈ ಕ್ರೀಡಾಕೂಟವು ವೈಯಕ್ತಿಕ ಮತ್ತು ಮುಕ್ತ ವಿಭಾಗದಲ್ಲಿ ನಡೆಯಲಿದೆ. ವೈಯಕ್ತಿಕ ವಿಭಾಗದಲ್ಲಿ 12 ವರ್ಷದೊಳಗಿನ ಬಾಲಕ ಬಾಲಕಿಯರಿಗೆ 'ಗುರಿ ಇಟ್ಟು ಹೊಡೆಯುವುದು, ಚಕ್ರವ್ಯೂಹ, ಗೋಣಿ ಚೀಲ ಓಟ, ಸೈಕಲ್ ಟಯರ್ ಓಟ, ನಿಮ್ಮ ಕಾಲ್ಗುಣ' ಸ್ಪರ್ಧೆಗಳು ನಡೆಯಲಿವೆ. 17 ವರ್ಷದೊಳಗಿನ ಬಾಲಕ ಬಾಲಕಿಯರಿಗೆ 'ಉಪ್ಪು ಮುಡಿ, ಗೋಣಿ ಚೀಲ ಓಟ, ಗೂಟ ಸುತ್ತಿ ಓಟ, ಸೈಕಲ್ ಟಯರ್ ಓಟ ಮತ್ತು ಕಂಬಳ' ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮುಕ್ತ ವಿಭಾಗದಲ್ಲಿ 65 ವರ್ಷದೊಳಗಿನ ಮಹಿಳೆಯರು ಹಾಗೂ ಪುರುಷರಿಗೆ ಗೋಣಿಚೀಲ ಓಟ, ಕಂಬಳ, ಸೈಕಲ್ ಟಯರ್ ಓಟ, ಗೂಟ ಸುತ್ತಿ ಓಟ, ಉಪ್ಪು ಮುಡಿ ಹಾಗೂ ಕಣ್ಣು ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಗುಂಪು ಆಟಗಳು ಮುಕ್ತ ವಿಭಾಗದಲ್ಲಿ ನಡೆಯಲಿದೆ. ಪುರುಷರಿಗೆ ಲಗೋರಿ, ಚೆಂಡಾನ್ ಚೆಂಡು, ಹಗ್ಗ ಜಗ್ಗಾಟ (9ಜನರ ತಂಡ) ಆಯೋಜಿಸಿದ್ದು, ಪ್ರಥಮ 12 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ 8ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ಮಹಿಳೆಯರಿಗೆ ಬೆನ್ಚೆಂಡು, ಡೊಂಕಾಲು, ಥ್ರೋ ಬಾಲ್ ಸ್ಪರ್ಧೆ ಆಯೋಜಿಸಿದ್ದು, ಪ್ರಥಮ 5 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ 3 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ 8 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ 5 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ಎಲ್ಲ ಕ್ರೀಡೆಗಳಿಗೂ ಮುಕ್ತ ಪ್ರವೇಶ ಇರಲಿದ್ದು, ಯಾವುದೇ ಪ್ರವೇಶ ಶುಲ್ಕ ಇಲ್ಲ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 98447 83053 ಸಂಪರ್ಕಿಸಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ರಾಜೇಶ್ ಕಾವೇರಿ, ಶ್ರೀಧರ್ ಸುವರ್ಣ, ರಾಮಚಂದ್ರ, ಕೆ.ಆರ್. ನಾಯಕ್ ಇದ್ದರು.

Ads on article

Advertise in articles 1

advertising articles 2

Advertise under the article