
ಆಸ್ತಿ ವಿವಾದ: ತಂದೆ-ಅಣ್ಣನನ್ನು ಬರ್ಬರವಾಗಿ ಹತ್ಯೆ ಮಾಡಿದ ಮಗ
Thursday, July 10, 2025
ಹಾಸನ: ಆಸ್ತಿ ವಿವಾದದಿಂದ ಸ್ವಂತ ಮಗನೇ ತನ್ನ ತಂದೆ ಮತ್ತು ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಗುರುವಾರ ನಡೆದಿದೆ. ತಂದೆ ದೇವೇಗೌಡ (70) ಮತ್ತು ಸಹೋದರ ಮಂಜುನಾಥ್ (50) ಕೊಲೆಯಾದವರು.
ಆರೋಪಿ ಮೋಹನ್ ಗೌಡನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೊಲೆಗೆ ಆಸ್ತಿ ವಿವಾದವೇ ಕಾರಣ ಎಂಬುದು ತಿಳಿದುಬಂದಿದೆ.
ತಂದೆ ದೇವೇಗೌಡರು ಕೆಲ ದಿನಗಳ ಹಿಂದೆ ಆಸ್ತಿ ಮಾರಾಟ ಮಾಡಿದ್ದರು. ಇದರಲ್ಲಿ ತನಗೂ ಪಾಲು ನೀಡಿಲ್ಲ ಎಂದು ಮೋಹನ್ ಗೌಡ ಕ್ಯಾತೆ ತೆಗೆದಿದ್ದ ಎನ್ನಲಾಗಿದೆ.
ಗುರುವಾರ ಮುಂಜಾನೆ ಕಂಠಪೂರ್ತಿ ಕುಡಿದು ಮನೆಗೆ ಬಂದ ಮೋಹನ್ ಗೌಡ ಸಹೋದರ ಮಂಜುನಾಥ್ ನನ್ನು ಮಚ್ಚಿನಿಂದ ಹೊಡೆದಿದ್ದಾನೆ. ಈ ವೇಳೆ ತಡೆಯಲು ಬಂದಾಗ ತಂದೆಯ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ತಾಯಿ ಜಯಮ್ಮ ಅವರ ಮೇಲೂ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ತಾಯಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ತನಿಖೆ ಮುಂದುವರೆದಿದೆ.