
ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ; ಎಲ್ಲಾ 7 ಆರೋಪಿಗಳನ್ನು ಖುಲಾಸೆಗೊಳಿಸಿದ ಎನ್ಐಎ ವಿಶೇಷ ನ್ಯಾಯಾಲಯ
ಮುಂಬೈ: 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎಲ್ಲಾ 7 ಆರೋಪಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ 17 ವರ್ಷಗಳ ನಂತರ ಮುಂಬೈನ ವಿಶೇಷ ಎನ್ಐಎ ನ್ಯಾಯಾಲಯವು ಗುರುವಾರ ತೀರ್ಪು ಪ್ರಕಟಿಸಿದೆ.
ಪುರೋಹಿತ್ ಆರ್‌ಡಿಎಕ್ಸ್ ತಂದಿರುವುದಕ್ಕೆ ಯಾವುದೇ ಸಾಕ್ಷಿಯಿಲ್ಲ, ಪಿತೂರಿ ಬಗ್ಗೆಯೂ ಯಾವುದೇ ಸಾಕ್ಷಿಯಿಲ್ಲ. ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡುವ ವೇಳೆ ಹೇಳಿದೆ.
2008ರ ಸೆಪ್ಟೆಂಬರ್ 29ರ ರಾತ್ರಿ ಮಾಲೆಗಾಂವ್‌ನ ಭಿಕ್ಕು ಚೌಕ್ ಬಳಿ ನಡೆದ ಸ್ಫೋಟದಲ್ಲಿ ಆರು ಜನರು ಮೃತಪಟ್ಟಿದ್ದರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಜನದಟ್ಟಣೆಯ ಪ್ರದೇಶದಲ್ಲಿ ಮೋಟಾರ್ ಸೈಕಲ್‌ಗೆ ಐಇಡಿ ಅಳವಡಿಸಲಾಗಿತ್ತು.
ಆರಂಭದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ತನಿಖೆ ನಡೆಸುತ್ತಿದ್ದ ಈ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿತ್ತು. ತನಿಖೆಯ ವೇಳೆ ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಮೇಜರ್ ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ್, ಸಮೀರ್ ಕುಲಕರ್ಣಿ, ಸುಧಾಕರ್ ದ್ವಿವೇದಿ ಮತ್ತು ಸುಧಾಕರ್ ಚತುರ್ವೇದಿ ಮೇಲೆ ಹಿಂದುತ್ವ ಸಿದ್ಧಾಂತಕ್ಕೆ ಸಂಬಂಧಿಸಿದ ವ್ಯಾಪಕ ಪಿತೂರಿಯ ಭಾಗವಾಗಿ ಸ್ಫೋಟವನ್ನು ರೂಪಿಸಿ ಕಾರ್ಯಗತಗೊಳಿಸಿದ ಆರೋಪವನ್ನು ಹೊರಿಸಲಾಗಿತ್ತು. ಇದೀಗ ಎಲ್ಲಾ ಆರೋಪಿಗಳನ್ನು ಎನ್‌ಐಎ ನ್ಯಾಯಾಲಯ ಖುಲಾಸೆಗೊಳಿಸಿದೆ.
2011ರಲ್ಲಿ ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಲಾಗಿತ್ತು. ಸಾಧ್ವಿ ಪ್ರಜ್ಞಾ ಅವರನ್ನು ಅಕ್ಟೋಬರ್ 2008ರಲ್ಲಿ ಬಂಧಿಸಲಾಗಿತ್ತು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದರು.