ದೇವನಹಳ್ಳಿ ಭೂಸ್ವಾಧೀನ ನಿರ್ಧಾರ ಕೈಬಿಟ್ಟ ರಾಜ್ಯ ಸರಕಾರ: ಈ ಬಗ್ಗೆ ರೈತರನ್ನು ಬೆಂಬಲಿಸಿ ಹೋರಾಟದಲ್ಲಿ ಭಾಗಿಯಾಗಿದ್ದ ನಟ ಪ್ರಕಾಶ್ ರಾಜ್  ಹೇಳಿದ್ದೇನು....?

ದೇವನಹಳ್ಳಿ ಭೂಸ್ವಾಧೀನ ನಿರ್ಧಾರ ಕೈಬಿಟ್ಟ ರಾಜ್ಯ ಸರಕಾರ: ಈ ಬಗ್ಗೆ ರೈತರನ್ನು ಬೆಂಬಲಿಸಿ ಹೋರಾಟದಲ್ಲಿ ಭಾಗಿಯಾಗಿದ್ದ ನಟ ಪ್ರಕಾಶ್ ರಾಜ್ ಹೇಳಿದ್ದೇನು....?

ಬೆಂಗಳೂರು: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ನಿರ್ಧಾರವನ್ನು ರಾಜ್ಯ ಸರಕಾರ ಕೈಬಿಟ್ಟಿರುವುದು ರೈತರ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ರೈತರನ್ನು ಬೆಂಬಲಿಸಿ ಹೋರಾಟದಲ್ಲಿ ಭಾಗಿಯಾಗಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಬಣ್ಣಿಸಿದ್ದಾರೆ.

ಭೂಸ್ವಾಧೀನ ಅಧಿಸೂಚನೆಯನ್ನು ರದ್ದು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್, ಇದು ಭೂಮಿ ಮಾರುವುದಿಲ್ಲ, ರೈತನಾಗಿ ಉಳಿಯುತ್ತೇವೆ ಎಂದು ನಿರಂತರವಾಗಿ ಹೋರಾಡಿದ ರೈತರ ಗೆಲುವು. ಇದೊಂದು ಐತಿಹಾಸಿಕ ಚಳವಳಿ ಎಂದು ಹೇಳಿದರು.

ಯಾವುದೇ ಸರಕಾರ ಜನರ ಸಮಸ್ಯೆಗೆ ಸ್ಪಂದಿಸಬೇಕಾದಾಗ ಅದು ನಮ್ಮದಲ್ಲದ ಹೋರಾಟವಾದರೂ, ಎಲ್ಲೋ ಮೂಲೆಯಲ್ಲಿ ಯಾರೋ ಒಬ್ಬರು ಹೋರಾಡುತ್ತಿದ್ದರೆ ಅವರ ಜೊತೆ ಇಡೀ ಜನರು ಬೆಂಬಲವಾಗಿ ನಿಂತಾಗ ಸರಕಾರಗಳು ಕೇಳಿಸಿಕೊಳ್ಳುತ್ತದೆ ಅನ್ನುವ ಕಾರಣಕ್ಕೆ ಇದು ಐತಿಹಾಸಿಕ ಗೆಲುವು ಎಂದವರು ವಿವರಿಸಿದರು.

ಯಾವುದೇ ಆಮಿಷಗಳಿಗೆ ಬಲಿಯಾಗದೆ ಮೂರು ವರ್ಷಗಳ ಕಾಲ ತಮ್ಮ ಭೂಮಿ ಸರಕಾರದ ಸ್ವಾಧೀನವಾಗದಂತೆ ತಡೆದ ರೈತರ ಹೋರಾಟ ವಿಶೇಷವಾದದ್ದು. ಯಾವುದೇ ಅನ್ಯಾಯ ನಡೆದಾಗ ಅನ್ಯಾಯಕ್ಕೆ ಒಳಗಾದವರು ಕೂಗುತ್ತಿದ್ದರೆ ಅವರನ್ನು ಬೇಗನೆ ದಮನ ಮಾಡುತ್ತಾರೆ. ತುಂಬಾ ದಿನ ಅಳುತ್ತಾ ನಿಲ್ಲುವುದಕ್ಕೂ ಅವರಿಗೆ ಆಗುವುದಿಲ್ಲ. ಆದರೆ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಅಳುತ್ತಾ ನಿಂತಿದ್ದಾಗ ಅವರ ಜೊತೆ ಇನ್ನೊಬ್ಬ ನಿಂತುಕೊಂಡರೆ ಚಳವಳಿ ಗೆಲ್ಲುತ್ತದೆ ಅನ್ನುವ ಸಂದೇಶ ಇಲ್ಲಿ ಮುಖ್ಯವಾಗುತ್ತದೆ. ಸಮಾಜದ ಪ್ರಜ್ಞೆಗೆ ಬಹಳ ದೊಡ್ಡ ಜಯ ಇದು. ಹೋರಾಟಗಳು ಬೆಳೆಯಲು. ಅಂತಹ ಹೋರಾಟಗಳಿಗೆ ಇದು ನಾಂದಿಯಾಗಲಿ ಎಂದವರು ಹೇಳಿದರು.

ಸಿದ್ದರಾಮಯ್ಯ ಜನಪರ ನಾಯಕ ಎಂಬುದು ಸಾಬೀತು ಮಾಡಿದ್ದಾರೆ...

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜನಪರವಾದ ಕಾಳಜಿಯಿದೆ. ಕೊನೆಗೂ ಅವರು ಜನಪರ ನಾಯಕ ಎಂಬುದನ್ನು ಸಾಬೀತು ಮಾಡಿದ್ದಾರೆ. ಅದರ ಜೊತೆಗೆ ರೈತರ ಕೂಗು ಕೇಳಿಸಿಕೊಳ್ಳಲೂ ಅವರು ಮೂರು ವರ್ಷ ತೆಗೆದುಕೊಂಡರು ಎಂಬುದನ್ನೂ ನಾವು ಗಮನಿಸಬೇಕಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದರು.

ಅಧಿಕಾರದಲ್ಲಿ ಯಾರೇ ಬಂದರೂ, ಎಷ್ಟೇ ಸಜ್ಜನರಾಗಿದ್ದರೂ ನಾಗರಿಕ ಸಮಾಜ ಪ್ರಶ್ನಿಸುವ ಶಕ್ತಿಯನ್ನು ಪಡೆದುಕೊಂಡಾಗ ಮಾತ್ರ ಅವರು ಸಜ್ಜನರಾಗಿರಲು ಸಾಧ್ಯ. ಇಲ್ಲದಿದ್ದರೆ ಅಧಿಕಾರ ಅವರನ್ನೂ ಸಜ್ಜನರಾಗಿರಲು ಬಿಡುವುದಿಲ್ಲ. ಬಹುಶಃ ಸಜ್ಜನರಿಗೆ ಕೂಡಾ ನಾವು ಬಲ ಕೊಡಬೇಕು ಎಂಬುದು ರೈತರ ಈ ಹೋರಾಟದಿಂದ ಸಾಬೀತಾಗಿದೆ ಎಂದು ಪ್ರಕಾಶ್ ರಾಜ್ ನುಡಿದರು.

Ads on article

Advertise in articles 1

advertising articles 2

Advertise under the article