
ದರ್ಖಾಸುನಲ್ಲಿ ಮಂಜೂರಾದ ಭೂಮಿಗಳ ಪೋಡಿ ಮಾಡುವ ಕಾರ್ಯ ಶೀಘ್ರವೇ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ
ಉಡುಪಿ: ರೈತರಿಗೆ ದರ್ಖಾಸುನಲ್ಲಿ ಮಂಜೂರಾದ ಭೂಮಿಗಳ ಪೋಡಿ ಮಾಡುವ ಕಾರ್ಯವನ್ನು ಮಳೆಗಾಲ ಮುಗಿದ ಕೂಡಲೇ ಪ್ರಾರಂಭಿಸಿ, 10,000 ಜನರಿಗೆ ಮಾಡಿಕೊಡಬೇಕೆಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಕುರಿತು ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ದರ್ಖಾಸು ನಲ್ಲಿ ಕಳೆದ 20 ರಿಂದ 50 ವರ್ಷಗಳಲ್ಲಿ ಮಂಜೂರಾಗಿರುವ ಜಮೀನಿಗೆ ಪೋಡಿ ಮಾಡಿ ರೈತರಿಗೆ ಪಹಣಿ ನೀಡುವ ಕಾರ್ಯಗಳ ವಿಲೇವಾರಿ ನಿಗದಿತ ಪ್ರಮಾಣದಲ್ಲಿ ಆಗಿರುವುದಿಲ್ಲ. ಕಂದಾಯ ಇಲಾಖೆಯ ಕೆಳ ಹಂತದ ಗ್ರಾಮ ಲೆಕ್ಕಾಧಿಕಾರಿಗಳು, ರೆವೆನ್ಯೂ ಇನ್ ಸ್ಪೆಕ್ಟರ್ ಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ರುಗಳು ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡಿ ಪೋಡಿ ಮಾಡುವ ಕಾರ್ಯದ ವೇಗವನ್ನು ಹೆಚ್ಚಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು .
ಪೌತಿ ಖಾತೆ ಮಾಡುವುದಕ್ಕೆ ಈಗಾಗಲೇ ರಾಜ್ಯದಲ್ಲಿ ಆರಂಭವಾಗಿದೆ. ಜಿಲ್ಲೆಯಲ್ಲೂ ಸಹ ಆರಂಭವಾಗಿದ್ದು, ಪ್ರಗತಿ ತುಂಬಾ ಕುಂಠಿತವಾಗಿದೆ. ಈ ಕಾರ್ಯದ ವೇಗವನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿ 2,92,000 ಜಮೀನಿನ ಪೌತಿ ಖಾತೆ ಮಾಡಬೇಕಿದೆ ಎಂದ ಅವರು, ಮೃತರ ಹೆಸರಿನಲ್ಲಿ ಜಮೀನಿನ ಖಾತೆಗಳು ಇದ್ದಲ್ಲಿ ಸರಕಾರದ ಸೌಲಭ್ಯಗಳು ಹಾಗೂ ಸಬ್ಸಿಡಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಇವುಗಳನ್ನು ಆದ್ಯತೆಯ ಮೇಲೆ ಮಾಡಬೇಕು. ಜಿಲ್ಲಾಧಿಕಾರಿಗಳು ಪ್ರಗತಿಯನ್ನು ಹೆಚ್ಚಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಪೂರ್ವ ಮುಂಗಾರಿನಲ್ಲಿ ಮಳೆ ಬರುವ ಸಂದರ್ಭದಲ್ಲಿ ಸಿಡಿಲು, ಗುಡುಗಿನಿಂದ ಪ್ರತಿ ವರ್ಷ 70 ಕ್ಕೂ ಹೆಚ್ಚು ಜನರು ರಾಜ್ಯದಲ್ಲಿ ಸಾವಗೀಡಾಗುತ್ತಿದ್ದಾರೆ. ಕಾರಣ ಸಿಡಿಲು ಬಡಿಯುವಾಗ ಜನರು ಎಲ್ಲಿ ಆಶ್ರಯ ಪಡೆಯಬೇಕು ಎಂಬ ಮಾಹಿತಿ ಕೊರತೆಯಿಂದ ಈ ರೀತಿಯ ಸಾವು -ನೋವುಗಳು ಉಂಟಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಪಂಚಾಯತ್ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಗಳು ಸಕ್ರಿಯವಾಗಿರಬೇಕು. ಒಂದು ವರ್ಷ ಮಾಡುವುದು ಮತ್ತೊಂದು ವರ್ಷ ಬಿಡುವುದು ಸರಿಯಲ್ಲ. ಮಳೆಗಾಲದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಅತಿವೃಷ್ಟಿ ಯಿಂದ ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದಲ್ಲಿ ಅವರುಗಳಿಗೆ ಪರಿಹಾರದ ಅನುದಾನವನ್ನು ನೀಡುವುದರ ಜೊತೆಗೆ ದೇವರಾಜ ಅರಸು ವಸತಿ ಯೋಜನೆಯಡಿಯಲ್ಲಿ ಮನೆಯನ್ನು ಮಂಜೂರು ಮಾಡಬೇಕು. ಈ ರೀತಿ ಮಂಜೂರು ಮಾಡುವ ಅಧಿಕಾರ ಕಂದಾಯ ಇಲಾಖೆಗೆ ಇದೆ. ಇದನ್ನು ಅನುಷ್ಠಾನಗೊಳಿಸಬೇಕು ಎಂದರು.
ಮಳೆಯಿಂದ ರಸ್ತೆಗಳು ಹಾಳಾಗಿವೆ. ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಳ್ಳಬೇಕು. ಇವು ಎನ್.ಡಿ.ಆರ್.ಎಫ್ ನಿಯಮಾವಳಿಯ ಪ್ರಕಾರ ಪ್ರಸ್ತಾವನೆಯನ್ನು ಸಲ್ಲಿಸಿದರೆ ಅನುಮೋದನೆ ನೀಡಲಾಗುವುದು. ಗುಂಡಿ ಮುಚ್ಚುವಂತಹ ಸಣ್ಣ ಪುಟ್ಟ ಕಾರ್ಯಗಳಿಗೆ ಹೆಚ್ಚು ಹೆಚ್ಚು ಅನುದಾನಬೇಕೆಂದು ಕೇಳಿದಲ್ಲಿ ಅನುಮತಿ ನೀಡುವುದು ಕಷ್ಟ. ಇವು ಎನ್.ಡಿ.ಆರ್.ಎಫ್ ನಿಯಮಾವಳಿಯ ಪ್ರಕಾರ ಮಾಡಿ ಜನರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಬಗರ್ ಹುಕುಂ ಅಡಿಯಲ್ಲಿ 687 ಜನರಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯವಾಗಬೇಕಾಗಿತ್ತು. ಆದರೆ ಇದುವರೆಗೆ ಕೇವಲ 9 ಜನರಿಗೆ ಮಾತ್ರ ವಿತರಿಸಲಾಗಿದೆ. ಆಗಸ್ಟ್ 15 ರ ಒಳಗಾಗಿ ಅರ್ಹರಿರುವ ಪ್ರತಿಯೊಬ್ಬರಿಗೂ ಹಕ್ಕುಪತ್ರ ವಿತರಿಸುವ ಕಾರ್ಯವಾಗಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭೂ ಸುರಕ್ಷಾ ಯೋಜನೆ ಅಡಿ ಕಂದಾಯ ಇಲಾಖೆಯ ಭೂ ದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯವು ನೆರೆಯ ಜಿಲ್ಲೆಗೆ ಹೋಲಿಸಿದಲ್ಲಿ ಕಡಿಮೆ ಇದೆ. ದಾಖಲೆಗಳನ್ನು ಗಣಕೀಕರಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕು. ಇಲ್ಲಸಲ್ಲದ ಸಬುಬೂ ಹೇಳುವುದು ಸರಿಯಲ್ಲ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಗ್ರಾಮ ಲೆಕ್ಕಿಗರಿಗೆ ಲ್ಯಾಪ್ ಟಾಪ್ ವಿತರಣೆಯನ್ನು ಮಾಡಲಾಗಿದೆ. ಗ್ರಾಮ ಲೆಕ್ಕಿಗರು ತಮ್ಮ ಪ್ರತಿಯೊಂದು ಕಾರ್ಯಗಳನ್ನು ಈಗಿನಿಂದಲೇ ಇ - ಆಫೀಸ್ ಮೂಲಕ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಡಿ.ಎಫ್.ಓ ಗಣಪತಿ, ವೈಲ್ಡ್ ಲೈಫ್ ಡಿ.ಎಫ್.ಓ ಶಿವರಾಮ್ ಎಂ ಬಾಬು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಮತ್ತಿತರರು ಉಪಸ್ಥಿತರಿದ್ದರು.