
ಉತ್ತರ ಪ್ರದೇಶ: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
ಲಕ್ನೋ: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬಳು (Student) ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಜ್ಯೋತಿ ಶರ್ಮಾ (20) ಎಂದು ಗುರುತಿಸಲಾಗಿದೆ. ಜ್ಯೋತಿ ಗ್ರೇಟರ್ ನೋಯ್ಡಾದ ಶಾರದಾ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಬಿಡಿಎಸ್ (ಡೆಂಟಲ್) ಕೋರ್ಸ್ ವ್ಯಾಸಾಂಗ ಮಾಡುತ್ತಿದ್ದರು. ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಶಿಕ್ಷಕರಿಂದ ಆಗುತ್ತಿದ್ದ ಕಿರುಕುಳವೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾಳೆ.
ಶುಕ್ರವಾರ ಕೊಠಡಿಯ ಬಾಗಿಲು ತೆರೆಯದಿರುವುದನ್ನು ಗಮನಿಸಿ, ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ತೆರೆದು ನೋಡಿದಾಗ ಆಕೆ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ರೂಮ್‌ನಲ್ಲಿ ಸಿಕ್ಕ ಡೆತ್‌ನೋಟ್‌ನಲ್ಲಿ, ಕೆಲವು ಶಿಕ್ಷಕರಿಂದ ನಿರಂತರ ಕಿರುಕುಳ ಮತ್ತು ಒತ್ತಡದಿಂದ ತಾನು ಈ ಕೃತ್ಯಕ್ಕೆ ಮುಂದಾದೆ. ಅವರಿಗೆ ಜೈಲು ಶಿಕ್ಷೆಯಾಗಬೇಕು ಎಂದು ಬರೆದಿದ್ದಾಳೆ.
ಗ್ರೇಟರ್ ನೋಯ್ಡಾ ಪೊಲೀಸ್ ಠಾಣೆಯ ಅಧಿಕಾರಿಗಳು, ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆರೋಪಿತ ಶಿಕ್ಷಕರನ್ನು ವಿಚಾರಣೆಗೆ ಕರೆಯಲಾಗುವುದು. ಈ ಪ್ರಕರಣವನ್ನು ಎಲ್ಲ ಕೋನಗಳಿಂದ ತನಿಖೆ ಮಾಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾರದಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಈ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.
ವಿದ್ಯಾರ್ಥಿಯ ಕುಟುಂಬವನ್ನು ಸಂಪರ್ಕಿಸಲಾಗಿದ್ದು, ಅವರು ಗ್ರೇಟರ್ ನೋಯ್ಡಾಕ್ಕೆ ಆಗಮಿಸಿದ್ದಾರೆ. ಈ ಘಟನೆಯಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಕರಿಂದ ಕಿರುಕುಳದ ಆರೋಪಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದೆ.