
ಎಲ್ಲ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣವನ್ನು ಕಡ್ಡಾಯಗೊಳಿಸಿದ ಉತ್ತರಾಖಂಡ ಸರ್ಕಾರ
ಡೆಹ್ರಾಡೂನ್: ಮಹತ್ವದ ಬೆಳವಣಿಗೆಯಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣವನ್ನು ಕಡ್ಡಾಯಗೊಳಿಸಲಾಗಿದ್ದು, ನಿತ್ಯ ಒಂದೊಂದು ಶ್ಲೋಖ ಪಠಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಎಲ್ಲಾ ಸರ್ಕಾರಿ ಶಾಲೆ(Government School)ಗಳಲ್ಲಿ ಭಗವದ್ಗೀತೆ(Bhagavad Gita) ಪಠಣ ಕಡ್ಡಾಯವೆಂದು ಉತ್ತರಾಖಂಡ ಸರ್ಕಾರ ಆದೇಶ ಹೊರಡಿಸಿದೆ.
ಜುಲೈ 14ರಂದು ಆದೇಶ ಹೊರಡಿಸಲಾಗಿದ್ದು, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೆಳಗ್ಗೆ ಭಗವದ್ಗೀತೆಯ ಶ್ಲೋಕಗಳನ್ನು ವಿದ್ಯಾರ್ಥಿಗಳು ಪಠಿಸಬೇಕೆಂದು ನಿರ್ದೇಶನ ನೀಡಲಾಗಿದೆ. ದಿನವೂ ಒಂದು ಶ್ಲೋಕವನ್ನು ಪಠಿಸುವುದಷ್ಟೇ ಅಲ್ಲದೆ ಒಂದು ಶ್ಲೋಕವನ್ನು ವಾರದ ಶ್ಲೋಕವೆಂದು ಘೋಷಿಸಿ ಅದರ ಅರ್ಥದೊಂದಿಗೆ ನೋಟಿಸ್ ಬೋರ್ಡ್ನಲ್ಲಿ ಬರೆಯುವಂತೆ ಸೂಚಿಸಲಾಗಿದೆ.
ಮೂಲಗಳ ಪ್ರಕಾರ ಭಗವದ್ಗೀತೆಯ ತತ್ವಗಳು ಮಾನವ ಮೌಲ್ಯಗಳು, ನಡವಳಿಕೆ, ನಾಯಕತ್ವ ಕೌಶಲ್ಯಗಳು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಭಾವನಾತ್ಮಕ ಸಮತೋಲನ ಮತ್ತು ವೈಜ್ಞಾನಿಕ ಚಿಂತನೆಯನ್ನು ಹೇಗೆ ಅಭಿವೃದ್ಧಿಪಡಿಸುತ್ತವೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡಲಿದ್ದಾರೆ ಎನ್ನಲಾಗಿದೆ.
ಉತ್ತರಾಖಂಡ ಸರ್ಕಾರದ ಅಧಿಕೃತ ಆದೇಶದ ಪ್ರಕಾರ, ರಾಜ್ಯದ ಸರ್ಕಾರಿ ಶಾಲೆಗಳ ಪ್ರಾರ್ಥನಾ ಸಭೆಯಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಒಂದು ಶ್ಲೋಕವನ್ನು ಅರ್ಥಪೂರ್ಣವಾಗಿ ಪಠಿಸಬೇಕು. ಆಧುನಿಕ ಶಿಕ್ಷಣದ ಜೊತೆಗೆ ಭಾರತೀಯ ಸಂಪ್ರದಾಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ಸುಮಾರು 17,000 ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ಬಂದಿದೆ.
ಈ ಕುರಿತು ಮಾಹಿತಿ ನೀಡಿದ ಶಿಕ್ಷಣ ನಿರ್ದೇಶಕ ಡಾ. ಮುಕುಲ್ ಕುಮಾರ್ ಸತಿ, 'ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಸಂಪ್ರದಾಯ ಮತ್ತು ಜ್ಞಾನ ವ್ಯವಸ್ಥೆಯ ಆಧಾರದ ಜೊತೆಗೆ ವಿವಿಧ ವಿಷಯಗಳನ್ನು ಕಲಿಸಲಾಗುವುದು ಎಂದು ಹೇಳಿದರು.
ಅಲ್ಲದೆ ಇದಕ್ಕೂ ಮೊದಲು, ಉತ್ತರಾಖಂಡದಲ್ಲಿ ರಾಜ್ಯ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಮೇ 6 ರಂದು ನಡೆದ ಸಭೆಯಲ್ಲಿ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಶ್ರೀಮದ್ ಭಗವದ್ಗೀತೆ ಮತ್ತು ರಾಮಾಯಣವನ್ನು ಅದರಲ್ಲಿ ಸೇರಿಸಲು ಸೂಚನೆಗಳನ್ನು ನೀಡಿದ್ದರು. ಬೋಧನೆಯು ಪಠ್ಯಕ್ರಮವನ್ನು ಮೀರಿ ಹೋಗಬೇಕು. ಈ ಪ್ರಾಚೀನ ಬೋಧನೆಗಳನ್ನು ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ನಿರ್ದೇಶಿಸಿದರು ಎಂದು ಹೇಳಿದರು.
ಭಗವದ್ಗೀತೆ ಮತ್ತು ರಾಮಾಯಣವನ್ನು ಸಹ ರಾಜ್ಯ ಪಠ್ಯಕ್ರಮದ ಚೌಕಟ್ಟಿನಲ್ಲಿ ಸೇರಿಸಲಾಗಿದ್ದು, ಇದರ ಪ್ರಕಾರ ಮುಂಬರುವ ಶೈಕ್ಷಣಿಕ ವರ್ಷದಿಂದ ಪುಸ್ತಕಗಳು ಲಭ್ಯವಾಗಲಿವೆ ಎಂದು ಅವರು ಮಾಹಿತಿ ನೀಡಿದರು.
ಸರ್ಕಾರದ ಕ್ರಮ ಸ್ವಾಗತಿಸಿದ ಮದರಸಾ ಶಿಕ್ಷಣ ಮಂಡಳಿ!
ಇನ್ನು ಉತ್ತರಾಖಂಡ ಸರ್ಕಾರದ ಈ ಕ್ರಮವನ್ನು ರಾಜ್ಯದ ಮದರಸಾ ಶಿಕ್ಷಣ ಮಂಡಳಿ ಸ್ವಾಗತಿಸಿದೆ. ಈ ಕುರಿತು ಮಾತನಾಡಿರುವ ಉತ್ತರಾಖಂಡ ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಮುಫ್ತಿ ಶಮೂನ್ ಖಾಸ್ಮಿ ಅವರು 'ಶಾಲೆಗಳಲ್ಲಿ ಭಗವದ್ಗೀತೆ ಮತ್ತು ರಾಮಾಯಣವನ್ನು ಕಲಿಸುವುದು ಮತ್ತು ಜನರಿಗೆ ಅವುಗಳ ಪರಿಚಯ ಮಾಡಿಕೊಡುವುದು ಬಹಳ ಒಳ್ಳೆಯ ಕೆಲಸ. ರಾಮ ಮತ್ತು ಕೃಷ್ಣ ಇಬ್ಬರೂ ನಮ್ಮ ಪೂರ್ವಜರು ಮತ್ತು ಪ್ರತಿಯೊಬ್ಬ ಭಾರತೀಯನು ಅವರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ.