
ತಲಪಾಡಿ ಟೋಲ್ ಗೇಟ್ ಬಳಿ ಭೀಕರ ಅಪಘಾತ; ಆಟೋಗೆ ಗುದ್ದಿದ ಬಸ್: ಮಗು ಸೇರಿ 6 ಜನ ಸಾವು
ಮಂಗಳೂರು: ಕಾಸರಗೋಡಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯ ಬಸ್ ಗುರುವಾರ ಬ್ರೇಕ್ ಫೇಲ್ ಆಗಿ ರಸ್ತೆ ಬದಿ ನಿಂತಿದ್ದ ವ್ಯಕ್ತಿಗಳಿಗೆ ಮತ್ತು ಆಟೋಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಜನ ಮೃತಪಟ್ಟಿದ್ದಾರೆ. ಈ ಘಟನೆ ಕೆಸಿರೋಡ್ ಸಮೀಪದ ತಲಪಾಡಿ ಟೋಲ್ ಗೇಟ್ ಬಳಿ ನಡೆದಿದೆ.
ಇಂದು ಮಧ್ಯಾಹ್ನ 1.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಬ್ರೇಕ್ ಫೇಲ್ ಆಗಿದ್ದರಿಂದ ಬಸ್, ಚಾಲಕನ ನಿಯಂತ್ರಣ ತಪ್ಪಿ, ಹಿಂದಕ್ಕೆ ಬಂದು ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಗಳಿಗೆ ಹಾಗೂ ಆಟೋಗೆ ಡಿಕ್ಕಿ ಹೊಡೆದಿದೆ.
ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಮಗು ಸೇರಿದಂತೆ ಆರು ಜನ ಸಾವನ್ನಪ್ಪಿದ್ದಾರೆ.
ಕೆಸಿರೋಡ್ ನಿವಾಸಿಗಳಾದ ರಿಕ್ಷಾ ಚಾಲಕ ಹೈದರ್ (47), ಖದೀಜಾ (60), ಹಸ್ನಾ (11), ನಫೀಸಾ (52), ಆಯಿಷಾ ಫಿದಾ (19), ಫರಂಗಿಪೇಟೆ ನಿವಾಸಿ ಅವ್ವಮ್ಮ(72) ಮೃತಪಟ್ಟಿದ್ದು, ಕಾಸರಗೋಡು ನಿವಾಸಿಗಳಾದ ಲಕ್ಷ್ಮಿ(61), ಸುರೇಂದ್ರ (39) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶೆಲ್ಟರ್ ಹತ್ತಿರ ನಿಲ್ಲಿಸಿದ್ದ ಆಟೋ ರಿಕ್ಷಾದಲ್ಲಿದ್ದವರೂ ಸಹ ಅಪಘಾತಕ್ಕೆ ಒಳಗಾಗಿದ್ದಾರೆ.
ಇದಲ್ಲದೆ, ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.