
ಆ.24ರಂದು ಉಡುಪಿಯಲ್ಲಿ "ಗ್ರಾಮೀಣ ಕ್ರೀಡೋತ್ಸವ"; ಈಶ ಫೌಂಡೇಶನ್ ಬೆಂಗಳೂರು ಆಯೋಜನೆ
ಉಡುಪಿ: ಈಶ ಫೌಂಡೇಶನ್ ಬೆಂಗಳೂರು ಇದರ ವತಿಯಿಂದ 'ಗ್ರಾಮೀಣ ಕ್ರೀಡೋತ್ಸವ' ಇದೇ ಆ. 24ರಂದು ಬೆಳಿಗ್ಗೆ 9ರಿಂದ ಸಂಜೆ 6ಗಂಟೆಯವರೆಗೆ ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಹೈಸ್ಕೂಲ್ ನಲ್ಲಿ ನಡೆಯಲಿದೆ ಎಂದು ಈಶ ಫೌಂಡೇಶನ್ ನ ಸ್ವಯಂ ಸೇವಕ ಸಭ್ಯತ್ ಶೆಟ್ಟಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಕ್ರೀಡೋತ್ಸವದಲ್ಲಿ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ ನಡೆಯಲಿದೆ. ಮೊದಲ ಹಂತದ ಕ್ಲಸ್ಟರ್ ಪಂದ್ಯಗಳು ಸೈಂಟ್ ಸಿಸಿಲಿಸ್ ಹೈಸ್ಕೂಲ್ ನಲ್ಲಿ ನಡೆಯಲಿದೆ ಎಂದರು.
ಕ್ಲಸ್ಟರ್ ಹಂತದಲ್ಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ಆಗುವ ತಂಡಗಳನ್ನು ವಿಭಾಗೀಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ವಿಭಾಗೀಯ ಮಟ್ಟದ ಪಂದ್ಯಾಟವು ಇದೇ ಆ.31ರಂದು ಕುಂದಾಪುರದ ಕೆರಾಡಿಯಲ್ಲಿ ಜರುಗಲಿದೆ. ಅಲ್ಲಿ ಚಾಂಪಿಯನ್ ಮತ್ತು ರನ್ನರ್ ಅಪ್ ಆದ ತಂಡಗಳನ್ನು ಸೆ.21ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯಲಿರುವ ಫೈನಲ್ ಪಂದ್ಯಾಟಕ್ಕೆ ಆಯ್ಕೆ ಮಾಡಲಾಗುತ್ತದೆ. ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ 10 ಸಾವಿರ, 7 ಸಾವಿರ, 5 ಸಾವಿರ ಹಾಗೂ 3 ಸಾವಿರ ನಗದು ಬಹುಮಾನ ನೀಡಲಾಗುವುದು. ಫೈನಲ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ವಾಲಿಬಾಲ್ ಹಾಗೂ ತ್ರೋಬಾಲ್ ತಂಡಗಳಿಗೆ ತಲಾ 5 ಲಕ್ಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಕ್ರೀಡೋತ್ಸವದಲ್ಲಿ ಭಾಗವಹಿಸುವ ತಂಡಗಳ ಎಲ್ಲ ಆಟಗಾರರು ಒಂದೇ ಗ್ರಾಮ ಅಥವಾ ಪಟ್ಟಣ ಪಂಚಾಯತ್ ನವರಾಗಿರಬೇಕು. ಒಂದು ಗ್ರಾಮದಿಂದ ಎಷ್ಟು ತಂಡ ಬೇಕಾದರೂ ಭಾಗವಹಿಸಬಹುದು. ನಗರಸಭೆ, ನಗರಪಾಲಿಕೆಯ ತಂಡಗಳು ಭಾಗವಹಿಸುವಂತಿಲ್ಲ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 83000 30999 ಅಥವಾ ವೆಬ್ ಸೈಟ್ ( isha.co/gramotsavam-ka) ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ವಯಂ ಸೇವಕರಾದ ಅಮಿತಾ ಭಟ್, ಹರಿಣಿ ಶೆಟ್ಟಿ ಇದ್ದರು.