
ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ-ವಂಚನೆ ಪ್ರಕರಣ: ಬೆದರಿಕೆ ಹಿನ್ನೆಲೆಯಲ್ಲಿ ಸಂತ್ರಸ್ತೆಯಿಂದ ಪೊಲೀಸ್ ರಕ್ಷಣೆ ಕೋರಿ ಪಶ್ಚಿಮ ವಲಯ ಐಜಿಪಿಗೆ ಮನವಿ
ಮಂಗಳೂರು: ಪುತ್ತೂರು ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ರ ಪುತ್ರ ಶ್ರೀಕೃಷ್ಣ ಜೆ. ರಾವ್ ಎಂಬಾತನಿಂದ ಅತ್ಯಾಚಾರ-ವಂಚನೆಗೊಳಗಾಗಿ ತಾಯಿಯಾಗಿರುವ ವಿದ್ಯಾರ್ಥಿನಿ ತನಗೆ ಬೆದರಿಕೆಯಿದ್ದು, ಪೊಲೀಸ್ ರಕ್ಷಣೆ ನೀಡಿ ಎಂದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾಳೆ.
ಸೋಮವಾರ ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಬಂದ ಸಂತ್ರಸ್ತೆ ಈ ಬಗ್ಗೆ ಮನವಿ ಸಲ್ಲಿಸಿದ್ದು, "ಇತ್ತೀಚೆಗೆ ನನ್ನ ಮನೆಯ ಸುತ್ತಮುತ್ತ ಕೆಲವ ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿದ್ದಾರೆ. ಅದರಲ್ಲೂ ರಾತ್ರಿಯ ವೇಳೆ ಅಪರಿಚಿತರ ಸಂಚರಿಸುತ್ತಿರುವುದು ನಾನು ಮತ್ತು ನನ್ನ ತಾಯಿ ಗಮನಿಸಿದ್ದೇವೆ. ನನಗೆ ಆಗಿರುವ ವಂಚನೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುವುದು ನನ್ನ ಮಗುವಿನಿಂದ ಮಾತ್ರ. ಆದ್ದರಿಂದ ನನ್ನ ಮಗುವಿನ ಜೀವಕ್ಕೆ ಯಾರಿಂದಲಾದರೂ ಅಪಾಯವಾಗುವ ಬಗ್ಗೆ ಭಯವಿದೆ. ಆದ್ದರಿಂದ ನನಗೆ ಮತ್ತು ನನ್ನ ಮಗುವಿಗೆ ಪೊಲೀಸ್ ರಕ್ಷಣೆ ನೀಡಬೇಕು'' ಎಂದು ಒತ್ತಾಯಿಸಿದ್ದಾಳೆ.
ಈ ಸಂದರ್ಭ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಡಿ ಮತ್ತಿತರರು ಉಪಸ್ಥಿತರಿದ್ದರು.
ಆರೋಪಿ ಶ್ರೀಕೃಷ್ಣ ಜೆ. ರಾವ್ ಸಹಪಾಠಿ ವಿದ್ಯಾರ್ಥಿನಿಗೆ ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾದ ಬಳಿಕ ಮದುವೆಯಾಗಲು ನಿರಾಕರಿಸಿರುವ ಬಗ್ಗೆ ಸಂತ್ರಸ್ತೆ ಜೂನ್ 24ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಆರೋಪಿ ವಿರುದ್ಧ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ಜೂ.27ರಂದು ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಶ್ರೀಕೃಷ್ಣ ರಾವ್ ನನ್ನು ಜುಲೈ 4ರಂದು ಪೊಲೀಸರು ಬಂಧಿಸಿದ್ದಾರೆ.