ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ; ಟ್ರಂಪ್'ಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ
ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ವಾರಾಣಸಿಗೆ ಭೇಟಿ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಸಿಂಧೂರ್ ನಂತರ ವಾರಾಣಸಿಗೆ ಮೋದಿ ನೀಡಿದ ಮೊದಲ ಭೇಟಿ ಇದಾಗಿದೆ. ಆಪರೇಷನ್ ಸಿಂಧೂರದ ಯಶಸ್ಸನ್ನು ಶಿವನ ಪಾದಗಳಿಗೆ ಅರ್ಪಿಸಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತವನ್ನು ಸತ್ತ ಆರ್ಥಿಕತೆ ಎಂದು ಟ್ರಂಪ್ ಟೀಕಿಸಿದ ಬೆನ್ನಲ್ಲೇ ವಾರಾಣಸಿಯಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ “ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಅದಕ್ಕಾಗಿಯೇ ಅದು ತನ್ನ ಆರ್ಥಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕು” ಎಂದು ಹೇಳಿದ್ದಾರೆ.
“ಜಗತ್ತಿನಲ್ಲಿ ಅಸ್ಥಿರತೆಯ ವಾತಾವರಣವಿದೆ. ಎಲ್ಲಾ ದೇಶಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತಿವೆ. ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ನಮ್ಮ ಸರ್ಕಾರವು ದೇಶದ ಹಿತದೃಷ್ಟಿಯಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ. ದೇಶಕ್ಕೆ ಒಳಿತನ್ನು ಬಯಸುವವರು ಮತ್ತು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ನೋಡಲು ಬಯಸುವವರು ಅದು ಯಾವುದೇ ರಾಜಕೀಯ ಪಕ್ಷವಾಗಿರಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ‘ಸ್ವದೇಶಿ’ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಬೇಕು ಮತ್ತು ಪ್ರಚಾರಪಡಿಸಬೇಕು” ಎಂದು ಮೋದಿ ಮನವಿ ಮಾಡಿದ್ದಾರೆ.
“ನಾವು ಭಾರತೀಯರು ತಯಾರಿಸಿದ ವಸ್ತುಗಳನ್ನು ಮಾತ್ರ ಖರೀದಿಸುತ್ತೇವೆ ಎಂದು ಜನರು ಸ್ಥಳೀಯರಿಗೆ ಧ್ವನಿಯಾಗಬೇಕು” ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ.
ವಾರಾಣಸಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಕಟುವಾದ ಟೀಕಾಪ್ರಹಾರ ನಡೆಸಿದ್ದಾರೆ. ಭಯೋತ್ಪಾದಕರು ಪಾತಾಳ ಲೋಕದಲ್ಲಿ ಆಶ್ರಯ ಪಡೆದರೂ ಸಹ ಅವರನ್ನು ಬಿಡುವುದಿಲ್ಲ ಎಂದು ಮೋದಿ ಎಚ್ಚರಿಸಿದ್ದಾರೆ. “ಅನ್ಯಾಯ ಮತ್ತು ಭಯೋತ್ಪಾದನೆ ಮುಂದೆ ಇದ್ದಾಗ ಮಹಾದೇವ ತನ್ನ ‘ರುದ್ರ ರೂಪ’ ತೋರುತ್ತಾನೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದ ಈ ಮುಖವನ್ನು ಜಗತ್ತು ನೋಡಿತು. ಭಾರತದಲ್ಲಿ ಭಯೋತ್ಪಾದನೆ ಬಿತ್ತುವ ಯಾರನ್ನೂ ‘ಪಾತಾಳ ಲೋಕ’ದಲ್ಲಿಯೂ ಬಿಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ವಿಪಕ್ಷಗಳ ವಿರುದ್ಧ ವಾಗ್ದಾಳಿ:
ವಿರೋಧ ಪಕ್ಷದ ವಿರುದ್ಧವೂ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. “ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಪಾಕಿಸ್ತಾನದಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ ಎಂಬುದನ್ನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನ ಅಸಮಾಧಾನಗೊಂಡಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಪಾಕಿಸ್ತಾನ ಅನುಭವಿಸುತ್ತಿರುವ ನೋವನ್ನು ಸಹಿಸಲಾರವು. ಪಾಕಿಸ್ತಾನ ಅಳುತ್ತಿದೆ. ಅದನ್ನು ನೋಡಿ ಇಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಅಳುತ್ತಿವೆ. ಕಾಂಗ್ರೆಸ್ ನಮ್ಮ ಸೇನಾ ಪಡೆಗಳ ಶೌರ್ಯವನ್ನು ನಿರಂತರವಾಗಿ ಅವಮಾನಿಸುತ್ತಿದೆ. ಆಪರೇಷನ್ ಸಿಂಧೂರ್ ಅನ್ನು ‘ತಮಾಷಾ’ ಎಂದು ಕರೆದಿದೆ” ಎಂದು ಪ್ರಧಾನಿ ಟೀಕಿಸಿದ್ದಾರೆ.