
ಚುನಾವಣಾ ಅಕ್ರಮ ನಡೆಯದಿದ್ದರೆ, ಮೋದಿ ಪ್ರಧಾನಿಯಾಗುತ್ತಿರಲಿಲ್ಲ; ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ಹೊರಹಾಕಿದ ರಾಹುಲ್ ಗಾಂಧಿ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಚುನಾವಣಾ ಆಯೋಗವು ಸಂಪೂರ್ಣವಾಗಿ ಸತ್ತು ಹೋಗಿದೆ. ಅಲ್ಲದೇ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಎಐಸಿಸಿ ಕಾನೂನಿ ಘಟಕದಿಂದ ಆಯೋಜಿಸಿದ್ದ ವಾರ್ಷಿಕ ಕಾನೂನು ಸಮಾವೇಶ – 2025ರಲ್ಲಿ ಮಾತನಾಡಿದ ಅವರು, ಸತ್ಯ ಏನು ಅಂದರೆ ಭಾರತದಲ್ಲಿ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತುಹೋಗಿದೆ. ಬಹಳ ಕಡಿಮೆ ಬಹುಮತ ಹೊಂದಿರುವ ಭಾರತದ ಪ್ರಧಾನಿ, 15 ಸ್ಥಾನಗಳಲ್ಲಿ ಅಕ್ರಮ ನಡೆಯದಿದ್ದರೆ, ಅವರು ಭಾರತದ ಪ್ರಧಾನಿಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನಾನು ಇತ್ತೀಚೆಗೆ ಚುನಾವಣಾ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದೇನೆ. ಆದರೆ 2014 ರಿಂದಲೂ ಏನೋ ತಪ್ಪಾಗಿದೆ ಎಂಬ ಅನುಮಾನ ನನಗಿತ್ತು. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೇ ಒಂದು ಸ್ಥಾನ ಸಿಗುವುದಿಲ್ಲ ಎಂದರೆ ಏನು ಅರ್ಥ? ಹೀಗಾಗಿ ಇದರ ಬಗ್ಗೆ ಅಧ್ಯಯನ ಮಾಡಿದ್ದೇವೆ ಎಂದಿದ್ದಾರೆ.
ಲೋಕಸಭಾ ಚುನಾವಣೆಯನ್ನು ಹೇಗೆ ತಿರುಚಬಹುದು ಮತ್ತು ಹೇಗೆ ತಿರುಚಲಾಯಿತು ಎಂಬುದನ್ನು ಮುಂದಿನ ಕೆಲವು ದಿನಗಳಲ್ಲಿ ನಾವು ನಿಮಗೆ ಸಾಬೀತುಪಡಿಸಲಿದ್ದೇವೆ. ಈ ಪುರಾವೆಯನ್ನು ಕಂಡುಹಿಡಿಯಲು ನಾವು 6 ತಿಂಗಳ ನಿರಂತರ ಕೆಲಸ ಮಾಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಹೇಗೆ ಕಳ್ಳತನ ನಡೆದಿದೆ ಎಂಬುದನ್ನು ನೀವು ಯಾವುದೇ ಸಂದೇಹವಿಲ್ಲದೆ ನೋಡುತ್ತೀರಿ. 6.5 ಲಕ್ಷ ಮತದಾರರು ಮತ ಚಲಾಯಿಸುತ್ತಾರೆ. ಆ ಮತದಾರರಲ್ಲಿ 1.5 ಲಕ್ಷ ಮತದಾರರು ನಕಲಿ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಭಾರತದ ಸಂವಿಧಾನದ ಪ್ರತಿಯನ್ನು ಎತ್ತಿ ಹಿಡಿದು, ಇದನ್ನು ಹೊಂದಿರುವ ಮತ್ತು ರಕ್ಷಿಸುವ ಸಂಸ್ಥೆಯನ್ನು ಅಳಿಸಿ ಹಾಕಲಾಗಿದೆ ಮತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ನಾವು ಬಿಡುಗಡೆ ಮಾಡುವ ಮಾಹಿತಿ ಆಯೋಗದಲ್ಲಿ ತಲ್ಲಣ ಸೃಷ್ಟಿಸಲಿದೆ. ಇದು ಅಕ್ಷರಶಃ ಪರಮಾಣು ಬಾಂಬ್‌ನಂತಿದೆ ಎಂದಿದ್ದಾರೆ.
ಬಿಜೆಪಿಯು ನಮ್ಮ ಧರ್ಮ, ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದೆ. ನೆಹರೂ, ಗಾಂಧಿ, ಸರ್ದಾರ್ ಪಟೇಲ್ ತಮ್ಮ ಯುವ ಜೀವನವನ್ನು ಜೈಲಿನಲ್ಲಿ ಕಳೆದರು. ಬ್ರಿಟಿಷರ ವಿರುದ್ಧ ಮಾತನಾಡಿದ್ದಕ್ಕೆ ಅವರೆಲ್ಲರು ಜೈಲಿನಲ್ಲಿದ್ದರು. ನಾವು ಸಹ ಜೈಲಿಗೆ ಹೋಗಲು ಹೆದರುವುದಿಲ್ಲ. ನಾವು ಸತ್ಯವನ್ನು ಸಮರ್ಥಿಸಿಕೊಳ್ಳಬೇಕು. ಅಹಿಂಸಾ ಮಾರ್ಗದ ಮೂಲಕ ನಾವು ಸತ್ಯದ ಪರ ಹೋರಾಡಬೇಕು. ವಕೀಲರು ನನಗೆ ಪ್ರೇರಣೆ ಹಾಗೂ ಮಾರ್ಗದರ್ಶಕರು ಎಂದು ತಿಳಿಸಿದ್ದಾರೆ.