ಮತಗಳ್ಳತನ ವಿರುದ್ಧ ಪ್ರತಿಭಟನೆ: ರಾಹುಲ್ ಗಾಂಧಿ ಸಹಿತ ಹಲವು ಸಂಸದರು ಪೋಲೀಸರ ವಶಕ್ಕೆ

ಮತಗಳ್ಳತನ ವಿರುದ್ಧ ಪ್ರತಿಭಟನೆ: ರಾಹುಲ್ ಗಾಂಧಿ ಸಹಿತ ಹಲವು ಸಂಸದರು ಪೋಲೀಸರ ವಶಕ್ಕೆ

ನವದೆಹಲಿ: ಮತ ಕಳ್ಳತನ ಹಾಗು ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಇಂಡಿಯಾ ಮೈತ್ರಿಕೂಟ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಸಂಸದರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಸೋಮವಾರ ತಿಳಿದುಬಂದಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಸಂಸತ್ ಭವನದಿಂದ ಕೇಂದ್ರ ಚುನಾವಣಾ ಆಯೋಗದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸಂಜಯ್ ರಾವತ್ ಮತ್ತು ಸಾಗರಿಕಾ ಘೋಷ್ ಸೇರಿದಂತೆ ಇಂಡಿಯಾ ಬ್ಲಾಕ್'ನ ಹಲವು ಸಂಸದರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಹಾಗೂ ಸರ್ಕಾರದ ನಡೆಯ ವಿರುದ್ಧ ಇದೀಗ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಹೊರಗೆ ಪ್ರಜಾಪ್ರಭುತ್ವದ ಮೇಲೆ ಹಲ್ಲೆ, ಕೊಲೆ ನಡೆಯುತ್ತಿದೆ ಎಂದು ಕಾಂಗ್ರೆಸ್‌ನ ಜೈರಾಮ್ ರಮೇಶ್ ಅವರು ಆರೋಪಿಸಿದ್ದಾರೆ.

"ಇದು ಸಂವಿಧಾನವನ್ನು ರಕ್ಷಿಸುವ ಹೋರಾಟ... ನಮಗೆ ಸ್ವಚ್ಛ ಮತದಾರರ ಪಟ್ಟಿ ಬೇಕು" ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಇದೇ ವಾಸ್ತವ. ಸತ್ಯ ದೇಶದ ಮುಂದೆ ಇದೆ. ಈ ಹೋರಾಟ ರಾಜಕೀಯವಲ್ಲ. ಈ ಹೋರಾಟ ಸಂವಿಧಾನವನ್ನು ಉಳಿಸುವ ಹೋರಾಟ. ಈ ಹೋರಾಟ ಒಬ್ಬ ವ್ಯಕ್ತಿ, ಒಂದು ಮತಕ್ಕಾಗಿ ಆಗಿದೆ. ನಮಗೆ ಸ್ವಚ್ಛ, ಶುದ್ಧ ಮತದಾರರ ಪಟ್ಟಿ ಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾತನಾಡಿ, ಅಧಿಕಾರದಲ್ಲಿದ್ದರೂ ಅವರಿಗೆ ಭಯವಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾತನಾಡಿ, ಜೈಲು ಕಂಬಿಗಳಿಂದ ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷಗಳನ್ನು ತಡೆಯಲು ಸಾಧ್ಯವಾಗುತ್ತದೆಯೇ?" ಎಂದು ಪ್ರಶ್ನಿಸಿದರು. ಈ ದೇಶದ ಜನರು ಮೋದಿ ಸರ್ಕಾರ ಮತ್ತು ಇಸಿಐನ ಪಾಲುದಾರಿಕೆಯನ್ನು ತಿರಸ್ಕರಿಸಿದ್ದಾರೆಂದು ಕಿಡಿಕಾರಿದ್ದಾರೆ.

ದೆಹಲಿ ಡಿಸಿಪಿ ದೇವೇಶ್ ಕುಮಾರ್ ಮಹ್ಲಾ ಅವರು ಮಾತನಾಡಿ, "ಚುನಾವಣಾ ಆಯೋಗದಿಂದ 30 ಸಂಸದರಿಗೆ ಮಾತ್ರ ಅನುಮತಿ ಇತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ, ನಾವು ಅವರನ್ನು ವಶಕ್ಕೆ ಪಡೆದಿದ್ದೇವೆ. 30 ಸಂಸದರಿಗೆ (ಇಸಿಐ ಅನ್ನು ಭೇಟಿ ಮಾಡಲು) ಅವಕಾಶ ನೀಡಲಾಗುವುದು ಎಂದು ನಾವು ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಮತ ಕಳ್ಳತನದ ವಿರುದ್ಧ ಧ್ವನಿ ಎತ್ತುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ. ಎಸ್​ಐಆರ್ ಸೋಗಿನಲ್ಲಿ ಬಿಹಾರದಲ್ಲಿ ಲಕ್ಷಾಂತರ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವಾಗಿದೆ ಎಂದು ವಿರೋಧ ಪಕ್ಷ ಆರೋಪಿಸಿದೆ.

ಪ್ಪತಿಭಟನೆಯಲ್ಲಿ ಕಾಂಗ್ರೆಸ್ , ಸಮಾಜವಾದಿ ಪಕ್ಷ, ಟಿಎಂಸಿ, ಡಿಎಂಕೆ, ಎಎಪಿ, ಎಡ ಪಕ್ಷಗಳು, ಆರ್‌ಜೆಡಿ, ಎನ್‌ಸಿಪಿ (ಎಸ್‌ಪಿ), ಶಿವಸೇನೆ (ಯುಬಿಟಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಹಲವಾರು ಪಕ್ಷಗಳು ಇಂಡಿಯಾ ಬ್ಲಾಕ್ ಬ್ಯಾನರ್​​ನಡಿ ಪ್ರತಿಭಟನೆ ನಡೆಸುತ್ತಿವೆ.

Ads on article

Advertise in articles 1

advertising articles 2

Advertise under the article