
ಧರ್ಮಸ್ಥಳ ಪ್ರಕರಣ; ಎನ್‌ಐಎ ತನಿಖೆ ಅಗತ್ಯವಿಲ್ಲ-ಎಸ್‌ಐಟಿ ತನಿಖೆಯಿಂದಲೇ ಸತ್ಯ ಹೊರ ಬರಲಿದೆ: ಡಾ.ಜಿ.ಪರಮೇಶ್ವರ್-ರಾಮಲಿಂಗಾರೆಡ್ಡಿ
ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯನ್ನು ತಳ್ಳಿ ಹಾಕಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎನ್‌ಐಎ ತನಿಖೆ ಅಗತ್ಯವಿಲ್ಲ. ಎಸ್‌ಐಟಿ ತನಿಖೆಯಿಂದಲೇ ಸತ್ಯ ಹೊರ ಬರಲಿದೆ ಎಂದಿದ್ದಾರೆ.
ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸಿದೆ. ತನಿಖೆಯಲ್ಲಿ ಎಲ್ಲ ಸತ್ಯಾಂಶಗಳು ಹೊರ ಬರಲಿದೆ. ಎಸ್‌ಐಟಿ ತನಿಖೆ ನಡೆದಿರುವಾಗ ಎನ್‌ಐಎ ತನಿಖೆ ಅಗತ್ಯವಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಎನ್‌ಐಎ-ಸಿಬಿಐ ತನಿಖೆ ಬೇಕಿಲ್ಲ:ರಾ.ರೆಡ್ಡಿ
ಧರ್ಮಸ್ಥಳ ಪ್ರಕರಣದ ತನಿಖೆ ಮುಗಿಯುವ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ಎನ್‌ಐಎ, ಸಿಬಿಐ ತನಿಖೆ ಬೇಕಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಧರ್ಮಸ್ಥಳ ಪ್ರಕರಣದ ತನಿಖೆ ನನ್ನ ಪ್ರಕಾರ ಶೇ. 90ರಷ್ಟು ಮುಗಿದಿದೆ. ಹೀಗಿರುವಾಗ ಬೇರೆ ತನಿಖೆ ಅಗತ್ಯವಿಲ್ಲ. ನಮ್ಮ ಪೊಲೀಸರೇ ತನಿಖೆಗೆ ಸಮರ್ಥರಿದ್ದಾರೆ ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣದ ಬಗ್ಗೆ ನಮ್ಮ ಸರ್ಕಾರ ಒಂದು ತೀರ್ಮಾನ ಕೈಗೊಂಡು ಎಸ್‌ಐಟಿ ತನಿಖೆ ನಡೆಸಿದ್ದರಿಂದ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಹೀಗಿರುವಾಗ ಎನ್‌ಐಎ, ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಅವರು ಪುನಾರುಚ್ಛರಿಸಿದರು.