
ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಮಲ್ಪೆಯ ಮಾನ್ಸಿ ಸುವರ್ಣ
ಉಡುಪಿ: ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿ ನಡೆದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಷಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಉಡುಪಿ ಜಿಲ್ಲೆ ಮಲ್ಪೆ ಮೂಲದ ಮಾನ್ಸಿ ಜೆ. ಸುವರ್ಣ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಮಲ್ಪೆಯಲ್ಲಿ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಜಗದೀಶ್ ಸುವರ್ಣ ಹಾಗೂ ಮಾಲತಿ ದಂಪತಿ ಪುತ್ರಿ ಮಾನ್ಸಿ ಜೆ. ಸುವರ್ಣ ಅವರು ಸದ್ಯ ಸ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ (ಎಸ್‌ಎಐ) ಗೋವಾ ಕೇಂದ್ರದಲ್ಲಿ ಬಾಕ್ಸಿಂಗ್‌ನಲ್ಲಿ ಅಭ್ಯಾಸ ನಡೆಸುತಿದ್ದಾರೆ.
ಮಣಿಪಾಲ ಪ್ರಗತಿನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಮಾನ್ಸಿ, ಬಾಕ್ಸಿಂಗ್‌ನಲ್ಲೇ ಸಾಧನೆ ಮಾಡುವ ಗುರಿಯೊಂದಿಗೆ ಕಳೆದ ಮೇ ತಿಂಗಳಲ್ಲಷ್ಟೇ ಎಸ್‌ಎಐ ಗೋವಾಕ್ಕೆ ಸೇರ್ಪಡೆಗೊಂಡಿದ್ದು, ಗೋವಾದ ಸೈಂಟ್ ಮೇರೀಸ್ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತಿದ್ದಾಳೆ.
ಪ್ರಾರಂಭದಲ್ಲಿ ಕರಾಟೆಯಲ್ಲಿ ತೊಡಗಿಸಿಕೊಂಡಿದ್ದ ಮಾನ್ಸಿ ಬಳಿಕ, ಬಾಕ್ಸಿಂಗ್‌ನಲ್ಲಿ ಆಸಕ್ತಿ ವಹಿಸಿ, ಅಲೆವೂರಿನ ಕೋಚ್ ಶಿವಪ್ರಸಾದ್ ಆಚಾರ್ಯರ ಬಳಿ ಅಭ್ಯಾಸ ಪ್ರಾರಂಭಿಸಿದ್ದಳು. ಈ ವರ್ಷ ಸಾಯಿ ಗೋವಾದಿಂದ ಬಾಕ್ಸಿಂಗ್ ಕುರಿತಂತೆ ಬಂದ ಜಾಹೀರಾತನ್ನು ನೋಡಿ ಅರ್ಜಿ ಸಲ್ಲಿಸಿದ್ದಳು. ವಿವಿಧ ಪರೀಕ್ಷೆಗಳನ್ನು ಗೆದ್ದು ಸಾಯಿಯಲ್ಲಿ ಬಾಕ್ಸಿಂಗ್ ತರಬೇತಿಗೆ ಆಯ್ಕೆಗೊಂಡಿದ್ದಳು. ಹೀಗಾಗಿ ಕೇಂದ್ರೀಯ ವಿದ್ಯಾಲಯ ತೊರೆದು ಗೋವಾದಲ್ಲಿ ಸೈಂಟ್ ಮೇರೀಸ್ ಹೈಸ್ಕೂಲ್‌ಗೆ ಸೇರ್ಪಡೆಗೊಂಡು ಸಾಯಿಯಲ್ಲಿ ಬಾಕ್ಸಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾಳೆ.
ಉತ್ತರ ಪ್ರದೇಶದ ನೊಯಿಡಾದಲ್ಲಿ ರಾಷ್ಟ್ರೀಯ ಸಬ್‌ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ತಾಂತ್ರಿಕ ಕಾರಣದಿಂದಾಗಿ ಗೋವಾದ ಬದಲು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದು ಬಾಲಕಿಯರ ವಿಭಾಗದಲ್ಲಿ ಪ್ರಥಮ ಪ್ರಯತ್ನದಲ್ಲೇ ತನ್ನ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾಳೆ.