ಉಡುಪಿ: ಆ.10ರಂದು "ಟೈಲರ್ಸ್ ವೃತ್ತಿ‌ ಬಾಂಧವರ ಬೃಹತ್ ಸಮಾವೇಶ"; ಉಡುಪಿ ಜಿಲ್ಲಾ ಟೈಲರ್ಸ್  ಅಸೋಸಿಯೇಷನ್ ನ "ರಜತ ಸಂಭ್ರಮ"

ಉಡುಪಿ: ಆ.10ರಂದು "ಟೈಲರ್ಸ್ ವೃತ್ತಿ‌ ಬಾಂಧವರ ಬೃಹತ್ ಸಮಾವೇಶ"; ಉಡುಪಿ ಜಿಲ್ಲಾ ಟೈಲರ್ಸ್ ಅಸೋಸಿಯೇಷನ್ ನ "ರಜತ ಸಂಭ್ರಮ"

ಉಡುಪಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಉಡುಪಿ ಜಿಲ್ಲಾ ಸಮಿತಿಯ "ರಜತ ಸಂಭ್ರಮ"-25, ಟೈಲರ್ಸ್  ವೃತ್ತಿ‌ ಬಾಂಧವರ ಬೃಹತ್ ಸಮಾವೇಶ ಹಾಗೂ ಮಹಾಸಭೆ ಇದೇ ಆ.10ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್  ಅಸೋಸಿಯೇಷನ್ ರಾಜ್ಯ ಕೋಶಾಧಿಕಾರಿ ಕೆ. ರಾಮಚಂದ್ರ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಗುರುರಾಜ ಎಂ. ಶೆಟ್ಟಿ ತಿಳಿಸಿದರು. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಸಮಾವೇಶವನ್ನು ಉದ್ಘಾಟಿಸುವರು. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. 

ರಾಜ್ಯಾದ್ಯಂತ ಸುಮಾರು 10ಲಕ್ಷಕ್ಕೂ ಅಧಿಕ ಸ್ತ್ರೀ-ಪುರುಷರು ಟೈಲರ್ ವೃತ್ತಿಯನ್ನು ಅವಲಂಬಿಸಿಕೊಂಡಿದ್ದು, ನಮ್ಮ ಬೇಡಿಕೆ ಈಡೇರಿಸುವಂತೆ ನಿರಂತರ 25 ವರ್ಷಗಳಿಂದ ರಾಜ್ಯ ಸರ್ಕಾರವನ್ನು ವಿವಿಧ ರೀತಿಯಲ್ಲಿ ಬಂದಿದ್ದೇವೆ. ಆದರೆ ಈವರೆಗೂ‌ ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಿಲ್ಲ. ಆದ್ದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಟೈಲರ್ ವೃತ್ತಿ ಬಾಂಧವರಿಗೆ 'ಭವಿಷ್ಯ ನಿಧಿ' ಜಾರಿಗೊಳಿಸಬೇಕು. ಸರ್ಕಾರ ಜವಳಿ ಉತ್ಪನ್ನಗಳಾದ ಬಟ್ಟೆಗಳು, ಸಿದ್ಧ ಉಡುಪುಗಳು ಹಾಗೂ ಹೊಲಿಗೆ ಯಂತ್ರ, ದಾರ ಇನ್ನಿತರ ಟೈಲರ್ ಬಳಸುವ ಎಲ್ಲಾ ಕಚ್ಚಾ ವಸ್ತುಗಳ ಮೇಲೆ ಸೆಸ್ ವಿಧಿಸಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ರೀತಿಯಲ್ಲಿ ನಮ್ಮ ಸಂಘಟಣೆಗೂ ಸವಲತ್ತುಗಳನ್ನು ನೀಡಬೇಕು. ಟೈಲರ್ಸ್ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು‌ ಪರಿಗಣಿಸಿ ಮಾಸಾಶನ, ವೃದ್ಧಾಪ್ಯ ವೇತನ, ವಿಧವಾ ವೇತನ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಷ್ಯವೇತನ, ಉಚಿತ ಆರೋಗ್ಯ ಸೇವೆ, ಜೀವ ವಿಮೆ, ಆರೋಗ್ಯ ವಿಮೆ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಟೈಲರ್ಸ್ 'ಕ್ಷೇಮ ನಿಧಿ ಮಂಡಳಿ'ಯನ್ನು ರಚಿಸಬೇಕು ಅಥವಾ ಟೈಲರ್ಸ್ ವೃತ್ತಿ ಬಾಂಧವರನ್ನು 'ಜವಳಿ ನಿಗಮ'ಕ್ಕೆ ಸೇರ್ಪಡೆಗೊಳಿಸಿ ಅದರ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸಬೇಕು‌ ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ, ಜೊತೆ ಕಾರ್ಯದರ್ಶಿ ಸೌಮ್ಯ ಭಟ್ ಇದ್ದರು.

Ads on article

Advertise in articles 1

advertising articles 2

Advertise under the article