ಸಿಎಂ ಸಿದ್ದರಾಮಯ್ಯ 24 ಜನರನ್ನು ಕೊಲೆ ಮಾಡಿದ್ದಾರೆ ಎಂಬ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆಯ ಸತ್ಯಾಸತ್ಯತೆ ಏನು..?

ಸಿಎಂ ಸಿದ್ದರಾಮಯ್ಯ 24 ಜನರನ್ನು ಕೊಲೆ ಮಾಡಿದ್ದಾರೆ ಎಂಬ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆಯ ಸತ್ಯಾಸತ್ಯತೆ ಏನು..?

ಮಂಗಳೂರು: ಸಿಎಂ ಸಿದ್ದರಾಮಯ್ಯ ಅವರು 24 ಜನರನ್ನು ಕೊಲೆ ಮಾಡಿದ್ದಾರೆ ಎಂಬ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೇಳಿಕೆಯ ಅಸಲಿಯತ್ತು ಈಗ ಬಹಿರಂಗವಾಗಿದೆ.

ಇನ್ನು ಈ ಹೇಳಿಕೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಬಿಜೆಪಿಗರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸುವಂತೆ ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಸತ್ಯಾಸತ್ಯತೆ ಅರಿಯೋಣ.....ಮಹೇಶ್ ಶೆಟ್ಟಿ ತಿಮರೋಡಿ ಎನ್ನಲಾದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ತಿಳಿಸಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರೂ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯ 24 ಜನರನ್ನು ಕೊಲೆ ಮಾಡಿದ್ದಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆಯೇ? ವೈರಲ್ ವೀಡಿಯೋದ ವಾಸ್ತವವೇನು?

ವೈರಲ್ ವೀಡಿಯೊ...

“ಸಿದ್ದರಾಮಯ್ಯ 24 ಜನರನ್ನು ಕೊಲೆ ಮಾಡಿದ್ದಾರೆ. ಸಿದ್ದರಾಮಯ್ಯ ತಕ್ಷಣ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕು” ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದನ್ನು ತೋರಿಸುವ ವೀಡಿಯೊ ಒಂದು ವೈರಲ್ ಆಗಿದೆ.

ಇದರ ಬೆನ್ನಲ್ಲೇ ತಿಮರೋಡಿ ವಿರುದ್ಧ ಕ್ರಮಕ್ಕೆ ಹಲವರು ಆಗ್ರಹಿಸಿದ್ದರು. ಧರ್ಮಸ್ಥಳ ವಿಚಾರದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡುತ್ತಾ, "ಯಾವನ್ಯಾರೊ ಒಬ್ಬ ಇದಕ್ಕೆಲ್ಲ ಕುಮ್ಮಕ್ಕು ಕೊಡುವವ ಸಿಎಂ ಕೊಲೆಗಾರ ಎಂದು ಹೇಳಿದ್ದಾನೆ. ಈ ಬಗ್ಗೆ ನೀವ್ಯಾರು ವರದಿ ಮಾಡಿಲ್ಲ" ಎಂದು ಹೇಳಿದ್ದರು.

ವೈರಲ್ ವಿಡಿಯೋ ಬಗ್ಗೆ ಚರ್ಚೆ:

ಇದೇ ವಿಡಿಯೋ ಕುರಿತು ಇಂದು ಸದನದಲ್ಲಿ ಕೂಡ ಚರ್ಚೆಯಾಗಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಯಾರು ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಅಪಚಾರ ಮಾಡುತ್ತಾ ಇದ್ದಾರೆಯೋ ಅದೇ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕೊಲೆಗಳನ್ನು ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದಾರೆ. ಧರ್ಮಸ್ಥಳದ ಬಗ್ಗೆ ಆರೋಪ ಬಂದ ಕೂಡಲೇ ಎಸ್ಐಟಿ ರಚನೆ ಮಾಡಿದ ಸರಕಾರ ಈಗ ಸಿಎಂ ವಿಚಾರದಲ್ಲಿ ಬಂದ ಆರೋಪಕ್ಕೂ ಎಸ್ಐಟಿ ರಚನೆ ಮಾಡುತ್ತದೆಯೇ ಎಂದು ಪ್ರಶ್ನಿಸಿದ್ದರು. ಧರ್ಮಸ್ಥಳ ಎಂದ ಕೂಡಲೇ ಎಸ್ಐಟಿ ರಚನೆ ಮಾಡಿದವರು ಸಿಎಂ ವಿರುದ್ಧದ ಆರೋಪದ ಬಗ್ಗೆ ಮಾತನಾಡುತ್ತಿಲ್ಲ. ಈ ಸರಕಾರಕ್ಕೆ ಕಿವಿ ಇಲ್ಲ, ಮೌನಕ್ಕೆ ಶರಣಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

ಸತ್ಯಾಸತ್ಯತೆ ಏನು....?

ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕೊಲೆಗಳನ್ನು ಮಾಡಿದ್ದಾರೆಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ ಎನ್ನಲಾದ ವೀಡಿಯೊವನ್ನು ಪರಿಶೀಲನೆ ನಡೆಸಿದಾಗ ಬಿಜೆಪಿ ಶಾಸಕ ಹರೀಶ್ ಪೂಂಜಾ ನೀಡಿದ್ದ ಈ ಹಿಂದೆ ಹೇಳಿಕೆಯನ್ನು ಪ್ರಸ್ತಾಪಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿಡಿಯೋವನ್ನು ಎಡಿಟ್ ಮಾಡಿ ವೈರಲ್ ಮಾಡಿರುವುದು ತಿಳಿದು ಬಂದಿದೆ.

ಈ ವೀಡಿಯೊ 2023 ರ ಮೇ 24ರದ್ದಾಗಿದ್ದು, ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿಯಲ್ಲಿ ಮಾತನಾಡುತ್ತಾ ‘ಸತ್ಯಣ್ಣ, 24 ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಮತ ಕೇಳಿದ್ದೀರಲ್ಲಾ? ಬಜರಂಗದಳನ್ನು ಬ್ಯಾನ್ ಮಾಡುತ್ತೇನೆ ಎಂದ ಕಾಂಗ್ರೆಸ್ ಗೆ ನೀವು ಮತ ಕೇಳಿದ್ದೀರಲ್ಲ, ಇಂದು ಬೆಳ್ತಂಗಡಿಯ ಜನ ಸತ್ಯಣ್ಣ ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಕೇಳಿದ್ದಾರೆ ಎಂದು ಹೇಳುವುದು ನೈಜ ವೀಡಿಯೊದಲ್ಲಿ ಸೆರೆಯಾಗಿದೆ.

ಈ ಬಗ್ಗೆ ನಮಿತಾ ಕೆ.ಪೂಜಾರಿ ಎಂಬವರ ದೂರಿನ ಮೇರೆಗೆ ಬೆಳ್ತಂಗಡಿ ಠಾಣೆಯಲ್ಲಿ ಹರೀಶ್ ಪೂಂಜಾ ವಿರುದ್ಧ ಕೋಮು ಪ್ರಚೋದನೆ, ಸಂವಿಧಾನ ಬಾಹಿರ ಹೇಳಿಕೆ ಆರೋಪದಲ್ಲಿ ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ನ 153, 153(ಎ), 505 (1)(ಬಿ), 505 (1) (ಸಿ) ಮತ್ತು 505 (2) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ ಪ್ರಕರಣಕ್ಕೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಕ್ಕಿತ್ತು.

ಅದಾಗಿ ಮೇ 26, 2023 ರಂದು ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡುತ್ತಾ " ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಹೇಳಿದ ಶಾಸಕ ಹರೀಶ್ ಪೂಂಜಾನನ್ನು ಜೈಲಿಗೆ ಹಾಕಿ. ಇಲ್ಲಾಂದ್ರೆ ಈ ರಾಜ್ಯದ ಜನ ಸಿಎಂ ಕೊಲೆ ಮಾಡಿದ್ದು ನಿಜ ಎಂದು ಭಾವಿಸುತ್ತಾರೆ" ಎಂದರ್ಥದಲ್ಲಿ ಹೇಳಿದ್ದರು.

ಆದರೆ ಇದೇ ವೀಡಿಯೊವನ್ನು ತಿರುಚಿ "ಸಿದ್ದರಾಮಯ್ಯ 24 ಜನರನ್ನು ಕೊಲೆ ಮಾಡಿದ್ದಾರೆ" ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ ಎಂದು ವೈರಲ್ ಮಾಡಿರುವುದು ಸತ್ಯ ಪರಿಶೀಲನೆಯ ವೇಳೆ ಬಹಿರಂಗವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪತ್ರಕರ್ತ ನವೀನ್ ಸೂರಿಂಜೆ, "ಹರೀಶ್ ಪೂಂಜಾ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡಿದಾಗ ಅವರಿಗೆ ಶಿಕ್ಷೆಯಾಗಿರಲಿಲ್ಲ. ಈಗ ವಿಪಕ್ಷದ ಆಗ್ರಹಕ್ಕಾದರೂ ಬೆಲೆಕೊಟ್ಟು ತನಿಖೆ ನಡೆಸಿ ಹರೀಶ್ ಪೂಂಜಾರನ್ನು ಜೈಲಿಗೆ ಹಾಕಿ. ಸಿದ್ದರಾಮಯ್ಯ 24 ಹಿಂದೂಗಳ ಕೊಲೆ ಮಾಡಿದ್ದಾರೆ ಎಂದು ಬೆಳ್ತಂಗಡಿಯಲ್ಲಿ ದಾಖಲಾದ ಪ್ರಕರಣದ ತಡೆಯಾಜ್ಞೆಯನ್ನು ತೆರವುಗೊಳಿಸಿ, ಅರೋಪಿಯನ್ನು ಬಂಧಿಸಲು ಕ್ರಮ ತೆಗೆದುಕೊಳ್ಳಿ" ಎಂದು ಹೇಳಿದ್ದಾರೆ.

ವಿಶೇಷ ಅಂದ್ರೆ ತಿಮರೋಡಿ ವಿರುದ್ಧ ಆರ್ ಅಶೋಕ್ ಈ ಗಂಭೀರ ಆರೋಪ ಮಾಡುವಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡ ಸದನದಲ್ಲಿದ್ದರು. ಆದರೆ ತಮ್ಮ ಹೇಳಿಕೆಯನ್ನೇ ತಿಮರೋಡಿ ಹೇಳಿಕೆ ಎಂದು ಅಶೋಕ್ ಹೇಳುವಾಗ ಪೂಂಜಾ ಅವರು ಈ ಬಗ್ಗೆ ಏನನ್ನೂ ಹೇಳಲಿಲ್ಲ.

Ads on article

Advertise in articles 1

advertising articles 2

Advertise under the article