ಉತ್ತರ ಪ್ರದೇಶದಲ್ಲಿ ಯೋಧನನ್ನು ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ ಟೋಲ್‌ ಸಿಬ್ಬಂದಿಗಳು; ವೀಡಿಯೊ ವೈರಲ್

ಉತ್ತರ ಪ್ರದೇಶದಲ್ಲಿ ಯೋಧನನ್ನು ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ ಟೋಲ್‌ ಸಿಬ್ಬಂದಿಗಳು; ವೀಡಿಯೊ ವೈರಲ್

ಲಕ್ನೋ: ದೇಶದಲ್ಲಿ ಇತ್ತೀಚೆಗೆ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದ್ದು, ದೇಶ ಕಾಯುವ ಯೋಧರಿಗೂ ಬೆಲೆ ಕೊಡದ ಸ್ಥಿತಿ ನಿರ್ಮಾಣವಾಗಿದೆ. ಕರ್ತವ್ಯಕ್ಕೆ ಮರಳುತ್ತಿದ್ದ ಯೋಧನನ್ನ ಟೋಲ್‌ ಪ್ಲಾಜಾ ಸಿಬ್ಬಂದಿ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ  ನಡೆದಿದೆ.

ಯೋಧ ಕಪಿಲ್ ಕವಾಡ್ ಹಲ್ಲೆಗೊಳಗಾದವರು. ಯೋಧನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವ ಅಮಾನವೀಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಳಿಕ ತನಿಖೆ ನಡೆಸಿದ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. 

ಏನಿದು ಘಟನೆ?

ಭಾರತೀಯ ಸೇನೆಯ ರಜಪೂತ ರೆಜಿಮೆಂಟ್‌ನಲ್ಲಿದ್ದ ಕಪಿಲ್‌ ಕವಾಡ್‌, ರಜೆಯ ನಿಮಿತ್ತ ಮನೆಗೆ ತೆರಳಿದ್ದರು. ಶ್ರೀನಗರದಲ್ಲಿರುವ ತಮ್ಮ ಕರ್ತವ್ಯದ ಸ್ಥಳಕ್ಕೆ ಮರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಟೋಲ್ ಬೂತ್‌ನಲ್ಲಿ ಸಿಲುಕಿಕೊಂಡಿದ್ದಾರೆ. ತನ್ನ ವಿಮಾನಕ್ಕೆ ತಡವಾಗುತ್ತಿದೆ ಎಂಬ ಆತಂಕದಿಂದ ಕಪಿಲ್ ಕಾರಿನಿಂದ ಇಳಿದು ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ ವಾಗ್ವಾದ ಉಂಟಾಗಿದೆ. 

ಟೋಲ್ ಪ್ಲಾಜಾದ ಐವರು ಸಿಬ್ಬಂದಿ ಕಪಿಲ್ ಮತ್ತು ಅವರ ಸೋದರ ಸಂಬಂಧಿಯನ್ನ ಥಳಿಸಿದ್ದಾರೆ. ಕಪಿಲ್‌ಗೆ ದೊಣ್ಣೆಯಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲವು ದಾಳಿಕೋರರು ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ವಿಡಿಯೋ ವೈರಲ್‌ ಆಗ್ತಿದ್ದಂತೆ ಕೇಸ್‌ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಎಸ್ಪಿ ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article