ಟ್ರಂಪ್ ಆಪ್ತನನ್ನು ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗಲೇ ಗುಂಡಿಟ್ಟು ಹತ್ಯೆ!
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ 31 ವರ್ಷದ ಚಾರ್ಲಿ ಕಿರ್ಕ್ ಅವರನ್ನು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.
ಚಾರ್ಲ್ಸ್ ಕಿರ್ಕ್ ಬಲಪಂಥೀಯ ರಾಜಕೀಯ ಕಾರ್ಯಕರ್ತರಾಗಿದ್ದರು. 2012 ರಲ್ಲಿ ʼಟರ್ನಿಂಗ್ ಪಾಯಿಂಟ್ʼ ಹೆಸರಿನಲ್ಲಿ ಸಂಘಟನೆಯನ್ನು ಸ್ಥಾಪಿಸಿದ್ದರು. ಟರ್ನಿಂಗ್ ಪಾಯಿಂಟ್ ಆಕ್ಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ರಾಷ್ಟ್ರೀಯ ನೀತಿ ಮಂಡಳಿಯ ಸದಸ್ಯರಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.
ಚಾರ್ಲಿ ಕಿರ್ಕ್ ಅವರು ತಮ್ಮ ಲಾಭರಹಿತ ರಾಜಕೀಯ ಸಂಸ್ಥೆ ಆಯೋಜಿಸಿದ್ದ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಗುಂಡಿನ ದಾಳಿಗೆ ಮೊದಲು ಕಿರ್ಕ್ ಸಾಮೂಹಿಕ ಗುಂಡಿನ ದಾಳಿ ಮತ್ತು ಬಂದೂಕು ಹಿಂಸಾಚಾರದ ಬಗ್ಗೆ ಪ್ರೇಕ್ಷಕರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು.
ಕಳೆದ 10 ವರ್ಷಗಳಲ್ಲಿ ಎಷ್ಟು ಟ್ರಾನ್ಸ್‌ಜೆಂಡರ್ ಅಮೆರಿಕನ್ನರು ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾರೆಂದು ನಿಮಗೆ ತಿಳಿದಿದೆಯೇ ಎಂಬ ಪ್ರಶ್ನೆಗೆ ಕಿರ್ಕ್ ಬಹಳ ಹೆಚ್ಚಿನ ಪ್ರಮಾಣದಲ್ಲಿ ದಾಳಿ ನಡೆಸಿದಾರೆ ಎಂದು ಉತ್ತರಿಸಿದ್ದರು. ಗುಂಡಿನ ದಾಳಿ ಕುರಿತ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ನೀಡುವಾಗಲೇ ಅವರ ಎದೆಗೆ ಗುಂಡು ಬಿದ್ದಿದೆ.
ಚಾರ್ಲಿ ಕಿರ್ಕ್ ಅವರ ಕಾರ್ಯಕ್ರಮಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕಿರ್ಕ್ ಅವರ ಕ್ಯಾಂಪಸ್ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ಸಾವಿರಕ್ಕೂ ಹೆಚ್ಚು ಮಂದಿ ಆನ್‌ಲೈನ್ ಮೂಲಕ ಸಹಿ ಹಾಕಿದ್ದರು.
ಟ್ರಂಪ್ ಪ್ರತಿಕ್ರಿಯಿಸಿ, ದಂತಕಥೆಯೂ ಆಗಿರುವ ಚಾರ್ಲಿ ಕಿರ್ಕ್ ನಿಧನರಾಗಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಚಾರ್ಲಿಗಿಂತ ಉತ್ತಮವಾಗಿ ಯಾರೂ ಯುವಕರ ಹೃದಯವನ್ನು ಅರ್ಥಮಾಡಿಕೊಂಡಿಲ್ಲ ಅಥವಾ ಹೊಂದಿರಲಿಲ್ಲ. ಅವರನ್ನು ಎಲ್ಲರೂ, ವಿಶೇಷವಾಗಿ ನಾನು ಪ್ರೀತಿಸುತ್ತಿದ್ದೆ ಮತ್ತು ಮೆಚ್ಚುತ್ತಿದ್ದೆ ಮತ್ತು ಈಗ ಅವರು ನಮ್ಮೊಂದಿಗೆ ಇಲ್ಲ. ಗುಂಡೇಟಿಗೆ ಬಲಿಯಾದ ಚಾರ್ಲಿ ಕಿರ್ಕ್‌ಗಾಗಿ ನಾವೆಲ್ಲರೂ ಪ್ರಾರ್ಥಿಸಬೇಕು ಎಂದು ಪೋಸ್ಟ್ ಮಾಡಿದ್ದಾರೆ.