ನೂತನ ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣಗೆ ಶುಭಾಶಯ ಕೋರಿದ ಡಾ. ಶೇಖ್ ವಾಹಿದ್ ದಾವೂದ್
ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರಿಗೆ ಕೆಪಿಸಿಸಿ ಮೈನಾರಿಟಿ ಕಮಿಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶೇಖ್ ವಾಹಿದ್ ದಾವೂದ್ ಶುಭಾಶಯ ಕೋರಿದ್ದಾರೆ.
ಡಾ. ಆರತಿಕೃಷ್ಣ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಜನಿಸಿದ್ದು ಉಡುಪಿಯಲ್ಲಿ. ಇವರ ತಂದೆ ಬೇಗಾನೆ ರಾಮಯ್ಯ, ತಾಯಿ ಸೀತಾ ಬಿ. ರಾಮಯ್ಯ. ತಂದೆ ಶೃಂಗೇರಿ ಎನ್.ಆರ್. ಪುರದಲ್ಲಿ ವಕೀಲರಾಗಿದ್ದು, ಶೃಂಗೇರಿ ಶಾಸಕರಾಗಿ, ರಾಜ್ಯ ಗ್ರಾಮೀಣಾಭಿವೃದ್ಧಿ ಮಾಜಿ ಸಚಿವರಾಗಿದ್ದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಅನಿವಾಸಿ ಭಾರತೀಯರು ಯಾರೇ ಸಂಕಷ್ಟಕ್ಕೀಡಾದರೂ ಕೂಡಲೇ ಸ್ಪಂದಿಸಿ ಅದಕ್ಕೆ ಪರಿಹಾರ ಒದಗಿಸುವ ಮೂಲಕ ಕೋವಿಡ್ ವಾರಿಯರ್ ಆಗಿಯೂ ಡಾ. ಆರತಿ ಕೃಷ್ಣ ಅವರು ಗುರುತಿಸಿಕೊಂಡಿದ್ದರು.
ಕಷ್ಟಕ್ಕೆ ಸಿಲುಕಿದ್ದ 40 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ವಿದೇಶದಿಂದ ತಾಯ್ನಾಡಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎನ್‌ಆರ್‌ಐ ಸಂಸ್ಥೆಗಳಿಗೆ ಚಾರ್ಟರ್ ವಿಮಾನಕ್ಕೆ ಬೇಕಾದ ಅನುಮತಿಯನ್ನು ರಾಯಭಾರಿ ಕಚೇರಿ ಮೂಲಕ ಒದಗಿಸಿಕೊಡಲು ಇವರು ಶ್ರಮಿಸಿದ್ದರು.






