ಅ.24ರಂದು ಬಹರೈನ್‌ನಲ್ಲಿ ದಾಖಲೆ ಸರದಾರಿಣಿ ಯೋಗಪಟು ತನುಶ್ರೀಯಿಂದ 10ನೇ ವಿಶ್ವದಾಖಲೆಯ ಪ್ರಯತ್ನ: ಅಜಿತ್ ಬಂಗೇರ
ಉಡುಪಿ: ಬಹ್ರೈನ್ ಕನ್ನಡ ಸಂಘದ ವತಿಯಿಂದ ದಾಖಲೆ ಸರದಾರಿಣಿ ಯೋಗಪಟು ತನುಶ್ರೀ ಪಿತ್ರೋಡಿ ಅವರಿಂದ 10ನೇ ವಿಶ್ವದಾಖಲೆಗೆ ಪ್ರಯತ್ನ ಕಾರ್ಯಕ್ರಮ ಅ.24ರಂದು 10ಗಂಟೆಗೆ ಬಹ್ರೈನ್ ಕನ್ನಡ ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಬಂಗೇರ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನುಶ್ರೀ ಒಂದು ಗಂಟೆ ಅವಧಿಯಲ್ಲಿ 300 ಯೋಗಾಸಾನಗಳನ್ನು ಪ್ರದರ್ಶಿಸುವ ಮೂಲಕ ಹೊಸ ಗೋಲ್ಡನ್ ಬುಕ್ ಆಫ್ ವಲ್ಡ್ ರೆರ್ಕಾಡ್ ದಾಖಲೆ ಬರೆಯುವ ಪ್ರಯುತ್ನ ಮಾಡಲಿದ್ದಾರೆ. ಈ ಮೂಲಕ ಇವರು ಮೂರು ವರ್ಷಗಳ ಹಿಂದೆ ತಾನೇ ದಾಖಲಿಸಿದ 45 ನಿಮಿಷಗಳಲ್ಲಿ 245 ಆಸನಗಳ ಪ್ರದರ್ಶನವನ್ನು ಮುರಿಯಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಹ್ರೈನ್‌ನ ಭಾರತೀಯ ರಾಯಭಾರಿ ಕಚೇರಿಯ ವಿನೋದ್ ಜಾಕೋಬ್ ಭಾಗವಹಿಸಲಿದ್ದಾರೆ. ಪ್ರಸ್ತುತ ಉಡುಪಿ ಸೈಂಟ್ ಸಿಸಿಲೀಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯು ತ್ತಿರುವ 16ರ ಹರೆಯದ ತನುಶ್ರೀ ಈವರೆಗೆ ಯೋಗಾಸನದ ಮೂಲಕ ಎರಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮತ್ತು ಆರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹಾಗೂ ಭರತ ನಾಟ್ಯದಲ್ಲಿ ಒಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತನುಶ್ರೀ ಅವರ ತಂದೆ ಉದಯ ಕುಮಾರ್, ಗ್ರಾಪಂ ಸದಸ್ಯ ಪ್ರವೀಣ್ ಕುರ್ಕಾಲು ಉಪಸ್ಥಿತರಿದ್ದರು.
